ಪಂಚಮಸಾಲಿ ಸಮುದಾಯ ಭವನಕ್ಕೆ ರು. 50 ಲಕ್ಷ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 3
ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಕಂತಿನ ರು. 50 ಲಕ್ಷ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭರವಸೆ ನೀಡಿದರು.
ಇಲ್ಲಿನ ಶಿವಶಾಂತವೀರ ಸಮುದಾಯ ಭವನದಲ್ಲಿ ಶನಿವಾರ ವೀರಶೈವ ಪಂಚಮಸಾಲಿ ತಾಲೂಕು ಘಟಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ, ನೂತನ ಸಚಿವ ಹಾಗೂ ಶಾಸಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಂಚಮಸಾಲಿ ಹಾಗೂ ಕುರುಬ ಸಮಾಜ ಬಾಂಧವರು ಅತಿಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಆಶೀರ್ವಾದ ಮಾಡಿ, ಅತಿ ಹೆಚ್ಚಿನ ಮತ ಹಾಕಿದ್ದೀರಿ. ಆದ್ದರಿಂದ ನಿಮ್ಮ ಸಮಾಜದ ರಕ್ಷಣೆ ನಿರಂತರವಾಗಿ ಮಾಡುತ್ತೇನೆ ಎಂದರು.
ಪಟ್ಟಣದ ಕೆಇಬಿ ವೃತ್ತದಲ್ಲಿ ನಿರ್ಮಾಣವಾಗಬೇಕಿರುವ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಮತ್ತು ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಅಗತ್ಯವಿರುವ ರು. 25 ಲಕ್ಷ ಮತ್ತು ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ರು. 2 ಕೋಟಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಿಎಂ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
2 ಎಕರೆ ನಿವೇಶನ: ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ತಮ್ಮ ತಂದೆಯವರನ್ನು ನಿರಂತರವಾಗಿ ಬೆಂಬಲಿಸುತ್ತ ಬಂದಿರುವ ಪಂಚಮಸಾಲಿ ಸಮಾಜ ಬಾಂಧದವರ ಋಣ ತಮ್ಮ ಮೇಲಿದೆ. ಆದರಿಂದ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ 2 ಎಕರೆ ಜಮೀನು ನೀಡುತ್ತೇನೆ ಎಂದು ಹೇಳಿದರು.
ಪಂಚಮಸಾಲಿ ಸಮಾಜವು ದಾಸೋಹ ಕಾಯಕವನ್ನು ಮಾಡುತ್ತಾ, ಕೃಷಿಯಿಂದ ಬದುಕನ್ನು ಕಟ್ಟಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದಿದ್ದರೂ ಸ್ವಾಭಿಮಾನ ಹೊಂದಿರುವ ಸಮಾಜದೊಂದಿಗೆ ಎಂ.ಪಿ. ಪ್ರಕಾಶರು ಅವಿನಾಭಾವ ಸಂಬಂಧ ಹೊಂದಿದ್ದರು. ಆ ಮೂಲಕ ಉಪಮುಖ್ಯಮಂತ್ರಿ ಸ್ಥಾನಕ್ಕೇರಿಸಿ ಉನ್ನತ ಹುದ್ದೆ ನೀಡಿರುವ ಕ್ಷೇತ್ರದ ಜನತೆ ಪ್ರಬುದ್ಧ ಮತದಾರರಾಗಿದ್ದಾರೆ ಎಂದರು.
ಅಶ್ವಿನಿಗೆ ಸನ್ಮಾನ: ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರಳಾದ ಅಶ್ವಿನಿ ಅಂಗಡಿ, ಚಿನ್ನದ ಪದಕ ಪಡೆದ ಹೊಳಗುಂದಿ ಸ್ನೇಹ, ಕೋಡಿಹಳ್ಳಿ ಚೇತನ್‌ಗೆ ಸನ್ಮಾನ, ಎಸ್ಸೆಸ್ಸೆಲ್ಸಿ, ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ 76 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಇಲಾಖೆ ನೌಕರರಿಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ವೀರಶೈವ ಪಂಚಮಸಾಲಿ ಹರಿಹರ ಪೀಠದ 2008 ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗವಿಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಪಂಚಮಸಾಲಿ ಸಮಾಜರದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಸುಧಾಕರ ಶ್ಯಾನಭೋಗ, ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಜಿಲ್ಲಾಧ್ಯಕ್ಷ ಜಿ. ಕುಮಾರಸ್ವಾಮಿ, ಪಿ. ನಾಗನಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಪೂರ್ಣಿಮಾ, ಶಿವಲಿಂಗಪ್ಪ ಜೂಲಿಕಟ್ಟಿ, ಹನಸಿ ಸಿದ್ದೇಶ, ಕೆ. ವಿರೂಪಾಕ್ಷಗೌಡ, ಎಂ.ವಿ. ಪಾಟೀಲ, ಕ್ಯಾಂಟಿನ್ ಚಂದ್ರಣ್ಣ, ಎನ್.ಎಂ. ಮಹೇಶ್ವರಪ್ಪ, ಮಹಾರುದ್ರಗೌಡ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಕ್ಕ, ಜಿಪಂ ಸದಸ್ಯೆ ನಳಿನಾ, ರವಿ, ಅಕ್ಕಿ ಶಿವಕುಮಾರ, ಲೋಲಾಕ್ಷಮ್ಮ, ಐಗೋಳ ಚಿದಾನಂದ, ಕೆ.ಎಸ್. ಶಾಂತನಗೌಡ ಇತರರು ಉಪಸ್ಥಿತರಿದ್ದರು.