ಶೌಚಾಲಯ ಜನರ ಬಳಕೆಗೆ ನೀಡಿ: ಆಯುಕ್ತರಿಗೆ ಮನವಿ
ಬಳ್ಳಾರಿ: ರು. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿ, ಉದ್ಘಾಟನೆಗೊಳ್ಳದ ಸಾಮೂಹಿಕ ಶೌಚಾಲಯವನ್ನು ಜನರ ಬಳಕೆಗೆ ನೀಡಬೇಕೆಂದು ಆಗ್ರಹಿಸಿ, ನವಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಮಹಾನಗರಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ನವಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಶೇಖರ್, ನಗರದ ಕೌಲ್ಬಜಾರ್ ಪ್ರದೇಶದಲ್ಲಿನ 28ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮೋರ್ ಗಲ್ಲಿಯಲ್ಲಿ 3 ವರ್ಷಗಳ ಹಿಂದೆ ರು. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯ ಜನರಿಗೆ ಬಳಕೆಯಾಗುತ್ತಿಲ್ಲ. ಶೌಚಾಲಯವನ್ನು ಜನರ ಉಪಯೋಗಕ್ಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮನವಿಯಲ್ಲಿ ಒತ್ತಾಯ: ಇನ್ನು ವಾರ್ಡ್ನ ಪ್ರಮುಖ ರಸ್ತೆಗಳಲ್ಲಿ ಹಂಪ್ಸ್ಗಳಿಲ್ಲದೆ, ಸಾಕಷ್ಟು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಆದ್ದರಿಂದ ರಸ್ತೆಗಳಲ್ಲಿ ಹಂಪ್ಸ್ಗಳನ್ನು (ವೇಗ ನಿಯಂತ್ರಕಗಳನ್ನು) ಹಾಕಬೇಕೆಂದು ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಜೊತೆಗೆ ಈ ಪ್ರದೇಶದಲ್ಲಿ ಕೂಡಲೇ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ವೇದಿಕೆ ಘಟಕಾಧ್ಯಕ್ಷ ಕೆ. ಕುಪ್ಪಸ್ವಾಮಿ, ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.