ಗ್ರಾಮಸ್ಥರಿಂದ ಕೋತಿ ಶವ ಸಂಸ್ಕಾರ
ಸಿರುಗುಪ್ಪ: ತಾಲೂಕಿನ ಮಲ್ಲೇಶ್ವರ ಗುಡ್ಡದಲ್ಲಿ ನಿತ್ಯವೂ ಗ್ರಾಮ ದೇವಿಯನ್ನು ತನ್ನ ಆರಾಧ್ಯ ದೈವವನ್ನಾಗಿ ನಂಬಿ, ನಿತ್ಯವೂ ಸ್ನಾನ ಮಾಡಿ ದೇವರ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದ ಕೋತಿಯೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕು ಕೆಂಚನಗುಡ್ಡ ಗ್ರಾಮಸ್ಥರು ರಾತ್ರಿ ಇಡೀ ಮನುಷ್ಯರ ಶವದಂತೆ ಕೋತಿಯ ಶವವನ್ನು ಕೂಡಿಸಿ ಅದರ ಮುಂದೆ ಭಜನೆ ಮಾಡಿ ಕೃತಜ್ಞರಾದರು.
ಸಿರುಗುಪ್ಪ ತಾಲೂಕಿನ ಐತಿಹಾಸಿಕ ಕೆಂಚನಗುಡ್ಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಮಲ್ಲೇಶ್ವರ ಗುಡ್ಡದಲ್ಲಿ ಮಹೇಶಗೌಡ ಎಂಬವರು ಬಹು ದಿನಗಳಿಂದ ಸಾಕಿದ್ದ ಕೋತಿ, ನಿತ್ಯವೂ ಮನುಷ್ಯರಂತೆ ಕಾಲುವೆಯಲ್ಲಿ ಸ್ನಾನ ಮಾಡಿ ಕೈಯಲ್ಲಿ ಒಂದು ಹೂವನ್ನು ಹಿಡಿದು ಗ್ರಾಮದೇವತೆ ಪಾದಕ್ಕೆ ಇಟ್ಟು ನಮಸ್ಕರಿಸುತ್ತಿತ್ತು. ದಿನಾಲು ಇದನ್ನೇ ಮಾಡುವ ಪದ್ಧತಿಯನ್ನು ಆ ಕೋತಿ ರೂಢಿಸಿಕೊಂಡಿತ್ತು. ಇದರಿಂದ ಈ ಭಾಗದಲ್ಲಿ ಈ ಕೋತಿಯನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು.
ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಕೋತಿ ಮೃತಪಟ್ಟ ಹಿನ್ನೆಲೆಯಲ್ಲಿ ಕೋತಿಯ ಭಕ್ತಿ ಭಾವಕ್ಕೆ ಬೆರಗಾಗಿದ್ದ ಗ್ರಾಮಸ್ಥರು ರಾತ್ರಿ ಇಡೀ ಭಜನೆ ಮಾಡುವ ಮೂಲಕ ಆ ಕೋತಿಯ ದೇವ ಭಾವಕ್ಕೆ ವಂದಿಸಿದರು.
ಅನಂತರ ಶನಿವಾರ ಮಧ್ಯಾಹ್ನ 1ಕ್ಕೆ ಸಂಪ್ರದಾಯಿಕ ರೀತಿಯಲ್ಲೇ ಶವಸಂಸ್ಕಾರ ನೆರವೇರಿಸಲಾಯಿತು.