ಚಿಮ್ಮನಹಳ್ಳಿ ಸಮಗ್ರ ಅಭಿವೃದ್ಧಿಗೆ ಯತ್ನ
ಹಗರಿಬೊಮ್ಮನಹಳ್ಳಿ: ಶಕ್ತಿದೇವತೆ ಶ್ರೀದೇವಿದುರುಗಮ್ಮ ನೆಲೆಸಿರುವ ಸುಕ್ಷೇತ್ರ ಚಿಮ್ಮನಹಳ್ಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಮೋರಗೆರಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವನ್ನು ಮುಂದಿನ ಐದು ವರ್ಷ ಅವಧಿಯಲ್ಲಿ ಸಂಪೂರ್ಣಗೊಳಿಸುವೆ ಎಂದರು.
ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯವನ್ನು ಕ್ರೀಡೆಗೂ ನೀಡಿ, ನಿಮ್ಮ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಬೇಕು. ಶಾಲೆಗಳಲ್ಲಿ ಕಲಿಯುವ ಹಂತದಲ್ಲಿಯೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಿ, ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರ ಮೇಲಿದ್ದು, ಸಮಾಜ ನಿಮ್ಮ ಮೇಲೆ ಇಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ನಾಡಿಗೆ ಉತ್ತಮ ಕ್ರೀಡಾಪಟುಗಳನ್ನು ನೀಡುವಂತೆ ದೈಹಿಕ ಶಿಕ್ಷಕರಲ್ಲಿ ಶಾಸಕರು ಮನವಿ ಮಾಡಿಕೊಂಡರು.
ಅನುದಾನ ನೀಡಿ: ಜಿಪಂ ಸದಸ್ಯೆ ಕರಿಬಸವನಗೌಡ್ರ ರತ್ನಮ್ಮ ಸಿದ್ದಲಿಂಗನಗೌಡ ಮಾತನಾಡಿ, ನನ್ನ ಅನುದಾನದಲ್ಲಿ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರು. 3.5 ಲಕ್ಷ ನೀಡಿರುವೆ. ಇಷ್ಟು ಅನುದಾನದಲ್ಲಿ ಭವನ ಪೂರ್ತಿಗೊಳಿಸಲು ಸಾಧ್ಯವಾಗದು. ಶಾಸಕರ ಅನುದಾನದಲ್ಲಿ ಹೆಚ್ಚಿನ ಅನುದಾನ ನೀಡಿ, ಭವನ ಹಾಗೂ ಊಟದ ಹಾಲ್ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು. ಭವನ ಸಂಪೂರ್ಣಗೊಳಿಸಲು ಅಗತ್ಯ ಇರುವ ಅನುದಾನ ನೀಡುವುದಾಗಿ ಶಾಸಕರು ಸಮಾರಂಭದಲ್ಲಿ ಜಿಪಂ ಸದಸ್ಯೆ ರತ್ನಮ್ಮಗೆ ಭರವಸೆ ಕೊಟ್ಟರು.
ಸಾಮಾಜಿಕ ಕಾರ್ಯಕರ್ತ ಕುರಿ ಶಿವಮೂರ್ತಿ, ತಾಪಂ ಸದಸ್ಯೆ ಲೋಹಿತ್ ಸಿದ್ದಪ್ಪ, ಜೆಡಿಎಸ್ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಎಂ. ಆನಂದ, ರೇವಣಸಿದ್ದಪ್ಪ, ಸದಸ್ಯರಾದ ಸುರೇಶ, ಪರಶುರಾಮ, ಕೆ. ನಾಗರಾಜ, ಮಂಜುಳಾ, ಎಸ್ಡಿಎಂಸಿ ಅಧ್ಯಕ್ಷ ಪಿ. ಲೋಕಪ್ಪ ಪೂಜಾರಿ ಸಿದ್ದಪ್ಪ ಲಿಂಗನಗೌಡ, ಲಿಂಗಪ್ಪ, ಬಿಇಒ ರಾಮನಗೌಡ ಇತರರು ಭಾಗವಹಿಸಿದ್ದರು.