ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಹಣಿ ಕೇಂದ್ರದ ಮುಂದೆ ನೆರಳಿನ ವ್ಯವಸ್ಥೆಗೆ ಕ್ರಮ

Vishwanath S
Updated On : 5 Aug 2013, 12:08 pm

ಸಿರುಗುಪ್ಪ: ತಾಲೂಕು ಕಚೇರಿಗೆ ಪಹಣಿ ಪಡೆಯಲು ಬರುವ ರೈತರಿಗೆ ಸರದಿಯಲ್ಲಿ ನಿಂತುಕೊಳ್ಳಲು ನೆರಳಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಾಸಕ ಬಿ.ಎಂ. ನಾಗರಾಜ ಅವರು ತಹಸೀಲ್ದಾರ್ ಸಿ.ಎಚ್. ಶಿವಕುಮಾರ್ ಅವರಿಗೆ ಅದೇಶ ನೀಡಿದರು. ಕಾರ್ಯಕ್ರಮದ ಅಂಗವಾಗಿ ಶನಿವಾರ ತಾಲೂಕು ಕಚೇರಿಗೆ ಆಗಮಿಸಿದ್ದ ಶಾಸಕ ಬಿ.ಎಂ. ನಾಗರಾಜ ಅವರು, ದಿಢೀರನೆ ಪಹಣಿ ವಿತರಣಾ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ರೈತರು, ಕಚೇರಿಯಲ್ಲಿ ಒಂದೇ ಒಂದು ಪಹಣಿ ವಿತರಣೆ ಕೇಂದ್ರವಿದೆ, ವಿದ್ಯುತ್ ಇಲ್ಲದ ವೇಳೆಯಲ್ಲಿ ಬ್ಯಾಟರಿ ವ್ಯವಸ್ಥೆ ಇಲ್ಲದೆ ಗಂಟೆಗಟ್ಟಲೆ ನಿಲ್ಲಬೇಕಿದೆ. ಸರದಿ ನಿಲ್ಲುವ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆಯಿಂದ ಕೂಡಿದೆ. ಅದೇ ರೀತಿ ಮಳೆ ಬಂದರೆ ಪಹಣಿ ಪಡೆಯುವುದನ್ನು ಬಿಟ್ಟು ಆಸರೆ ನೋಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ನೆರಳಿನ ವ್ಯವಸ್ಥೆ ಸೇರಿದಂತೆ ಮತ್ತೊಂದು ಪಹಣಿ ಕೌಂಟರ್‌ನ್ನು ಪ್ರಾರಂಭಿಸುವಂತೆ ಶಾಸಕರಲ್ಲಿ ಸಾರ್ವಜನಿಕರು ಮನವಿ ಮಾಡಿದರು. ನಂತರ ತಹಸೀಲ್ದಾರ್ ಮಾತನಾಡಿ, ನೆರಳಿ ವ್ಯವಸ್ಥೆ ಕಲ್ಪಿಸಲು ಇಲಾಖೆಗೆ ಯಾವುದೇ ರೀತಿಯ ಅನುದಾನವಿಲ್ಲ, ಅದೇರೀತಿ ಸ್ವಚ್ಛತೆ ಕಾಪಾಡಲು ಪುರಸಭೆಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಬ್ಯಾಟರಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಈಗಾಗಲೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು. ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ಶೀಘ್ರವೇ ಶೀಟ್‌ಗಳ ಮೂಲಕ ನೆರಳಿನಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಸಕಾಲ ಸೇವೆ ನೀಡಲು ಅರ್ಜಿ
ಬಳ್ಳಾರಿ: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ನೀಡಲಾಗುತ್ತಿರುವ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸಬೇಕೆನ್ನುವ ಸದುದ್ದೇಶದಿಂದ ಜಿಲ್ಲೆಯಲ್ಲಿ ಈ ಸೌಲಭ್ಯ ಜಾರಿಗೆ ತರಲು ಸಹಮತದಿಂದ ಸೇವೆ ನೀಡಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ. ಅರ್ಜಿದಾರರು ಕರ್ನಾಟಕ ಸಕಾಲ ಸೇವೆ ಅಧಿನಿಯಮದಲ್ಲಿ ಬರುವ ಸೇವೆಗಳ ಬಗ್ಗೆ ಅರ್ಥೈಸಿಕೊಂಡು, ಇದರ ಬಗ್ಗೆ ಸಹಮತದಿಂದ ಸೇವೆ ಒದಗಿಸುವಂಥವರಾಗಿರಬೇಕು. ಸ್ಕ್ಯಾನರ್ ಸಾಮಗ್ರಿ ವ್ಯವಸ್ಥೆಯುಳ್ಳ ಫೋಟೋ ಸ್ಟುಡಿಯೋ, ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡುತ್ತಿರುವ ಹಾಗೂ ಆನ್‌ಲೈನ್ ಟಿಕೇಟ್ ನೀಡುವ ಕೇಂದ್ರಗಳು, ಸರ್ಕಾರಿ ಸಂಚಾರಿ ಟಿಕೇಟ್ ಒದಗಿಸುವ ಕೇಂದ್ರ (ರೈಲು ಹಾಗೂ ಸರ್ಕಾರಿ ರಸ್ತೆ ಸಾರಿಗೆ), ಅಂತರ್ಜಾಲ ಸಂಪರ್ಕ ಹೊಂದಿರುವ ಕೇಂದ್ರ (ಸೈಬರ್ ಕೆಫೆ, ವೆಬ್ ಪಾರ್ಲರ್), ಗಣಕಯಂತ್ರ, ಮುದ್ರಣ ಸಾಮಗ್ರಿ(ಪ್ರಿಂಟರ್), ಅಂತರ್ಜಾಲದ ಮೂಲಕ ದೃಶ್ಯ ಗ್ರಹಿಸುವ (ಕ್ಯಾಪ್ಚರ್) ವೆಬ್‌ಕ್ಯಾಮ್ ಸಾಮಗ್ರಿಗಳನ್ನು ಹೊಂದಿರುವ ಹಾಗೂ ಬಯೋ ಮೆಟ್ರಿಕ್ ತಂತ್ರಜ್ಞಾನ ಸಾಮಗ್ರಿಗಳ ಬಗ್ಗೆ ಅರಿವುಳ್ಳ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಕ್ತಿಗಳು, ಕೇಂದ್ರಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಈ ಪ್ರಕಟಣೆ ಪ್ರಕಟವಾದ 15 ದಿನಗಳೊಳಗೆ ಇ-ಮೇಲ್ ವಿಳಾಸ ಡಛ್ಞಛಟಛಣಟ್ಝ್ಛಿ.್ಝಟಿ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಕಾಲ ಸೇವೆಗಳ ಅಂತರ್ಜಾಲ ತಾಣ ವಿಳಾಸ ಢಿಢಿಢಿ.ಡಛ್ಞಛಟಛ.್ಞಛ್ಠ.ಟ್ಝ್ಛಿ.್ಝಟಿ ಗೆ ಸಂಪರ್ಕಿಸಬಹುದೆಂದು         ತಿಳಿಸಿದ್ದಾರೆ.
ಇಂದು ಮಾಹಿತಿ ಕಾರ್ಯಾಗಾರ
ಬಳ್ಳಾರಿ: ಜಿಲ್ಲೆಯ ಮಾನವ ಅಭಿವೃದ್ಧಿ ವರದಿಯ ಮಹತ್ವದ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ಸಲುವಾಗಿ ಜಿಲ್ಲಾ ಪಂಚಾಯಿತಿ ನಜೀರ್ ಸಭಾಂಗಣದಲ್ಲಿ ಆ. 5ರಂದು ಬೆಳಗ್ಗೆ 11ಕ್ಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಮಂಜುನಾಥ ನಾಯಕ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಎಲ್ಲ ಸದಸ್ಯರು, ಜಿಲ್ಲಾ ಮಟ್ಟದ ಕೋರ್ ಕಮಿಟಿ ಸದಸ್ಯರು, ವಿಶೇಷ ಆಹ್ವಾನಿತರು, ಲೀಡ್  ಏಜೆನ್ಸಿ ಮತ್ತು ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರಕ್ಕೆ ಹಾಜರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ
ಸಿರುಗುಪ್ಪ: ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ಸಿರುಗುಪ್ಪ ತಾಲೂಕು ಅತಿಥಿ ಉಪನ್ಯಾಸಕರ ವೇದಿಕೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ರುದ್ರಪ್ಪ, ಉಪಾಧ್ಯಕ್ಷರಾಗಿ ಶಂಕರ್ ಗುರಿಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮುದುಕಪ್ಪ, ಖಜಾಂಚಿಯಾಗಿ ರಾಮಣ್ಣ ಪೂಜಾರಿ, ಸಹ ಕಾರ್ಯದರ್ಶಿಯಾಗಿ ಎಚ್.ಎಸ್. ಮಲ್ಲಿಕಾರ್ಜುನ, ಮಾಧ್ಯಮ ಸಂಚಾಲಕರಾಗಿ ವೀರೇಶ ನಾಯ್ಕ, ಶ್ರೀನಿವಾಸ, ಎನ್. ರಾಮಕೃಷ್ಣಯ್ಯ, ಸದಸ್ಯರಾಗಿ ಚಾಗಿ ವೀರೇಶ್, ಮಂಜುಳಾ, ಶ್ವೇತಾ, ಕೃಷ್ಣವೇಣಿ ಆಯ್ಕೆಯಾಗಿದ್ದಾರೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಮಹೇಶ್ ಬಿಸೂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಂಗಲ್ಯ ಅಪಹರಣ
ಬಳ್ಳಾರಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯವನ್ನು ಕಳ್ಳರು ದೋಚಿ ಬೈಕ್‌ನಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ಹೊಸಪೇಟೆಯ ಟಿ.ಬಿ. ಡ್ಯಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪಿ. ಪುಷ್ಪಾವತಿ ಎಂಬವರು ತಮ್ಮ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕಳ್ಳರು ಬೈಕ್‌ನಲ್ಲಿ ಬಂದು 20 ಗ್ರಾಂ ತೂಕದ ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಟಿ.ಬಿ. ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಸ್ಕೂಟರ್‌ನಲ್ಲಿದ್ದ ಹಣ ಕಳ್ಳತನ
ಬಳ್ಳಾರಿ: ಮೋಟರ್ ಸೈಕಲ್‌ವೊಂದರ ಸೀಟಿನ ಕೆಳಗಡೆ ಇರಿಸಲಾಗಿದ್ದ ಹಣವನ್ನು ಕಳವು ಮಾಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಜರುಗಿದೆ. ಸುಮಂಗಳಾ ಎಂಬವರು ಪಟ್ಟಣದ ಆಕ್ಸಿಸ್ ಬ್ಯಾಂಕ್‌ನ ಎಟಿಎಂನಿಂದ ರು. 25 ಸಾವಿರ ಹಣ ಪಡೆದು ತಮ್ಮ ಸ್ಕೂಟಿ ಪೆಪ್ ಪ್ಲಸ್ ವಾಹನದ ಸೀಟಿನ ಕೆಳಗಡೆ ಡಿಕ್ಕಿಯಲ್ಲಿ ಇರಿಸಿದ್ದ ಹಣವನ್ನು ಕಳವು ಮಾಡಲಾಗಿದೆ ಎಂದು ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಕೀಲರಿಂದ ದೂರು ಪ್ರತಿದೂರು
ಬಳ್ಳಾರಿ: ನ್ಯಾಯವಾದಿ ಪಾಂಡುರಂಗ ಅವರು ಹಿರಿಯ ನ್ಯಾಯವಾದಿ ಬಿ.ವಿ. ಬಸವರಾಜ್ ಸೇರಿದಂತೆ 20 ಜನರು ಮೇಲೆ ಜಾತಿ ನಿಂದನೆ ದೂರನ್ನು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬಸವರಾಜ್ ಅವರನ್ನು ಪಾಂಡುರಂಗ ಅವರು ಕೊಲೆ ಮಾಡಲು ಯತ್ನಿಸಿದರು ಎಂದು ಮತ್ತೋರ್ವ ನ್ಯಾಯವಾದಿ ಬಸವರಾಜ್ ನಾಯ್ಕ ಅವರು ಪಾಂಡುರಂಗ ಮೇಲೆ ಪ್ರತಿದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜು. 30ರಂದು ವಕೀಲರ ಸಂಘದ ಕಚೇರಿಯಲ್ಲಿ ವಕೀಲ ಎರ್ರೆಗೌಡರ ಜತೆ ಮಾತನಾಡುತ್ತಿರುವಾಗ ನ್ಯಾಯವಾದಿ ಬಿ.ವಿ. ಬಸವರಾಜ್ ಇತರರು ತಮ್ಮ ಹಲ್ಲೆ ಮಾಡಿದ್ದಾರೆ. ರವೀಂದ್ರ ರೆಡ್ಡಿ ಎನ್ನುವವರು ನನ್ನ ಕುತ್ತಿಗೆಗೆ ಕೈ ಹಾಕಿ ಸಾಯಿಸಲು ಮುಂದಾಗಿದ್ದರು. ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನನ್ನ ಮೇಲೆ ಹಲ್ಲೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಪಾಂಡುರಂಗ ಅವರು ತಿಳಿಸಿದ್ದಾರೆ. ಇನ್ನು ನ್ಯಾಯವಾದಿ ಬಸವರಾಜ್ ನಾಯ್ಕ್ ಅವರು ಪಾಂಡುರಂಗನ ಮೇಲೆ ಪ್ರತಿದೂರನ್ನು ನೀಡಿ, ಪಾಂಡುರಂಗ ಎನ್ನುವವರು ನ್ಯಾಯವಾದಿ ಬಿ.ವಿ. ಬಸವರಾಜ್ ಎನ್ನುವವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿದೂರನ್ನು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕಳ್ಳತನ: ದೂರು ದಾಖಲು
ಬಳ್ಳಾರಿ: ತಾಲೂಕಿನ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭಾಗ್ಯನಗರ ಕ್ಯಾಂಪ್‌ನ ಮನೆಯೊಂದರಲ್ಲಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಭಾಗ್ಯನಗರ ಕ್ಯಾಂಪ್‌ನ ಲಿಂಗನಗೌಡ ಎಂಬವವರ ಮನೆಯ ಬೀಗ ಮುರಿದು, ಮನೆಯಲ್ಲಿದ್ದ ರು. 9 ಸಾವಿರ ನಗದು, ಮೊಬೈಲ್ ಮತ್ತು ಬಂಗಾರದ ಆಭರಣಗಳು ಸೇರಿದಂತೆ ಒಟ್ಟು ರು. 1 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಮನೆಯ ಮಾಲೀಕ ಲಿಂಗನಗೌಡ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement