ಲೋಕಸಭೆಗೆ ದೇವೇಂದ್ರಪ್ಪ ಅಭ್ಯರ್ಥಿಯಾಗಿಸಲು ಮನವಿ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ. ದೇವೇಂದ್ರಪ್ಪ ಅವರ ಹೆಸರನ್ನು ಪರಿಗಣಿಸಬೇಕು ಎಂದು ಪಟ್ಟಣಕ್ಕೆ ಆಗಮಿಸಿದ್ದ ಕೆಪಿಸಿಸಿ ವೀಕ್ಷಕರಿಗೆ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ. ವಾಣಿ ಶಿವಶಂಕರಗೌಡ ಮತ್ತಿತರು ಮನವಿ ಅರ್ಪಿಸಿದ್ದಾರೆ.
ಲೋಕಸಭೆಗೆ ಚುನಾವಣೆ ಯಾವುದೆ ಕ್ಷಣದಲ್ಲಾದರೂ ಘೋಷಣೆಯಾಗುವ ಸಂಭವವಿದ್ದು, 1999ರ ವರೆಗೂ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ, 2004 ಮತ್ತು 2008ರ ಚುನಾವಣೆಯಲ್ಲಿ ಪಕ್ಷದ ಹಿಡಿತ ಕೈತಪ್ಪಿದೆ. ಈಸಲ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಕೆಪಿಸಿಸಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಸಿ.ಆರ್. ಸಗೀರ್ ಆಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಪರಿಗಣಿಸಿ: ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಎನ್.ವೈ. ಹನುಮಂತಪ್ಪ ಅವರನ್ನು ಬದಲಾಯಿಸುವ ಸಂದರ್ಭ ಒದಗಿ ಬಂದಲ್ಲಿ, ರಾಜ್ಯದಲ್ಲಿ ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಅಸ್ಥಿತ್ವಕ್ಕೆ ಬಂದ ಆರಂಭದಲ್ಲಿಯೇ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ನಾಗರಿಕ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಉತ್ತಮ ಆಡಳಿತ ನೀಡಿರುವ ದೇವೇಂದ್ರಪ್ಪ ಅವರನ್ನು ಅಭ್ಯರ್ಥಿತನಕ್ಕೆ ಪರಿಗಣಿಸುವಂತೆ ವಾಣಿ ಶಿವಶಂಕರಗೌಡ ಮನವಿ ಪತ್ರದ ಮೂಲಕ ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.