ಶ್ರದ್ಧೆ, ಆಸಕ್ತಿ ಅಭ್ಯಾಸದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 4
ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿಯಿಂದ ಅಭ್ಯಸಿಸಿದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ ಎಚ್.ಜಿ. ಶೇಖರಪ್ಪ ತಿಳಿಸಿದರು.
ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ 2013-14ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಯೇ ಅತಿದೊಡ್ಡ ವಿವಿಯಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವ್ಯಾಪ್ತಿಯಲ್ಲಿ 204 ತಾಂತ್ರಿಕ ಕಾಲೇಜುಗಳಿದ್ದು, 4,50,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯಲ್ಲಿರುವ ಸುಮಾರು 32 ವಿಭಾಗಗಳಿಗೂ ಸಮಾನ ಮಹತ್ವವಿರುವ ಜತೆಗೆ ವ್ಯಾಸಂಗ ಮಾಡಿದ ಎಲ್ಲ ತಾಂತ್ರಿಕ ವಿದ್ಯಾರ್ಥಿಗಳಿಗೂ ಕೆಲಸ ಸಿಗುವ ಸಂಭವವಿದೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ಕೆಲವು ವಿಷಯಗಳಿಗೆ ಕೋಚಿಂಗ್ ಕ್ಲಾಸುಗಳಿಗೆ ಹೋಗುವ ಬದಲು ಪ್ರತಿದಿನ ಕಾಲೇಜಿಗೆ ಹಾಜರಾಗಿ ನಡೆಯುವ ಪಾಠಗಳನ್ನೇ ಗಮನವಿಟ್ಟು ಕೇಳಿದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಬಹುದು ಎಂದ ಅವರು, ವಿದ್ಯಾರ್ಥಿಗಳು, ಪೋಷಕರಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ವಿಟಿಯು ಹೆಲ್ಪ್ಲೈನ್ ಮೂಲಕ ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದರು.
ವಿ.ವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿ.ವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಪದಾಧಿಕಾರಿಗಳಾದ ಎಚ್.ಎಂ. ಗುರುಸಿದ್ಧಸ್ವಾಮಿ, ಜೆ. ನೇಪಾಕ್ಷಪ್ಪ, ಸಂಗನಕಲ್ಲು ಹಿಮಂತರಾಜ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ, ಸದಸ್ಯರಾದ ಅಲ್ಲಂ ವಿನಾಯಕ, ಎಂ. ರಾಜೇಂದ್ರಕುಮಾರ, ಕಾಲೇಜಿನ ಪ್ರಾಚಾರ್ಯ ಡಾ ಟಿ. ಹನುಮಂತರೆಡ್ಡಿ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ ಕೆ. ವೀರೇಶ್ ಸ್ವಾಗತಿಸಿದರು. ಡಾ ಎ. ತಿಮ್ಮನಗೌಡ ಅತಿಥಿಗಳನ್ನು ಪರಿಚಯಿಸಿದರು. ಕೆ.ಕೆ. ಗುರುರಾಜ ನಿರೂಪಿಸಿದರು. ಪ್ರಾಧ್ಯಾಪಕ ಟಿ.ಎಚ್. ಪಟೇಲ್ ವಂದಿಸಿದರು.
ವಿದ್ಯಾರ್ಥಿಗಳು ಕೆಲವು ವಿಷಯಗಳಿಗೆ ಕೋಚಿಂಗ್ ಕ್ಲಾಸುಗಳಿಗೆ ಹೋಗುವ ಬದಲು ಪ್ರತಿದಿನ ಕಾಲೇಜಿಗೆ ಹಾಜರಾಗಿ ನಡೆಯುವ ಪಾಠಗಳನ್ನೇ ಗಮನವಿಟ್ಟು ಕೇಳಿದಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಬಹುದು.
-ಡಾ. ಎಚ್.ಜಿ. ಶೇಖರಪ್ಪ, ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ