133 ಕಾರ್ಮಿಕರ ದಿಢೀರ್ ವಜಾ: ಧರಣಿ
ಹೊಸಪೇಟೆ: ಎಂಎಸ್ಪಿಎಲ್ ಗಣಿ ಸಂಸ್ಥೆಯ 133 ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿರುವ ಕ್ರಮವನ್ನು ವಿರೋಧಿಸಿ ಮತ್ತು ಸಂಸ್ಥೆಯಿಂದ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಎಂಎಸ್ಪಿಎಲ್ ವ್ಯಾಸನಕೆರೆ ಗಣಿ ಸಂಸ್ಥೆ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಎಸಿ ಕಚೇರಿ ಸಿಬ್ಬಂದಿಗೆ ಮನವಿ ಪತ್ರಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಎಚ್. ವೆಂಕಟೇಶ್, ಎಂಎಸ್ಪಿಎಲ್ ಗಣಿ ಕಂಪನಿಯಲ್ಲಿ 15-20 ವರ್ಷಗಳಿಂದ ಹಗಲು ರಾತ್ರಿಯೆನ್ನದೆ ಟಟ್ರಾ ಆಪರೇಟರ್ಗಳು, ಪೋಕ್ಲೈನ್ ಆಪರೇಟರ್ಗಳು, ಮಷನಿಸ್ಟ್ಗಳು ಸೇರಿದಂತೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾ ತಮ್ಮ ಕುಟುಂಬವನ್ನು ಸಲುಹುತ್ತಿದ್ದರು. ಆದರೆ ಕಂಪನಿ ಯಾವುದೇ ಮಾಹಿತಿ ನೀಡದೆ 133 ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದು ಅನ್ಯಾಯ. ಕೆಲಸದಿಂದ ತೆಗೆದಿರುವ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಬೀದಿ ಪಾಲು: ಕಾರ್ಮಿಕ ಇಲಾಖೆಯ ಕಾನೂನುಗಳ ಅನ್ವಯ ಕಾರ್ಮಿಕರಿಗೆ ಮಾಹಿತಿ ನೀಡದೆ, ದಿಢೀರನೆ ಒಂದು ದಿನ ಮುಂಚಿತವಾಗಿ ಸಭೆ ಕರೆದು ಮೌಖಿಕವಾಗಿ ನಾಳೆಯಿಂದ 133 ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದೇವೆ ಎಂದು ತಮ್ಮ ಕಚೇರಿಯ ನೋಟೀಸ್ ಬೋರ್ಡ್ನಲ್ಲಿ ಕಾರ್ಮಿಕರ ಹೆಸರನ್ನು ಪ್ರಕಟಿಸಿದ್ದಾರೆ. ಆದರೆ ಗಣಿ ಕಂಪನಿ ನಂಬಿಕೊಂಡು ಬದುಕುತ್ತಿದ್ದ ಈ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ತಕ್ಷಣ ಕಾರ್ಮಿಕರನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕರ್ತವ್ಯ ನಿರ್ವಹಿಸುವಾಗ ಅನೇಕ ಕಾರ್ಮಿಕರಿಗೆ ಅಪಘಾತಗಳು, ಹೃದಯಾಘಾತ ಸೇರಿದಂತೆ ಅನೇಕ ಅವಘಡಗಳು ನಡೆದು ಅಂಗವೈಕಲ್ಯದಿಂದ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರ ಪಾಡು ಈಗ ಹೇಳತೀರದು. ಆದರೆ ಸಂಸ್ಥೆಯ 133 ಕಾರ್ಮಿಕರು ಸೇವೆ ಸಲ್ಲಿಸಿದ ಅವಧಿಗೆ ಮಾತ್ರ ವರ್ಷಕ್ಕೆ 15 ದಿನಗಳ ವೇತನ ಮತ್ತು ಗ್ರಾಚ್ಯುಟಿ ಪರಿಹಾರ ಹಣವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಿಗದಿಪಡಿಸಿ ಹಣ ನೀಡುತ್ತಿರುವುದು ಸರಿಯಲ್ಲ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಸರ್ವಿಸ್ನಲ್ಲಿ ವರ್ಷಕ್ಕೆ ಮೂರು ತಿಂಗಳ ಗ್ರಾಸ್ ಸ್ಯಾಲರಿಯನ್ನು ನೀಡುವ ಮೂಲಕ ಕಾರ್ಮಿಕರಿಗೆ ಸೂಕ್ತ ಪರಿಹಾರ ಒದಗಿಸಿಕೊಟ್ಟು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆನಂತರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು.