ನಾಟಕದಿಂದ ಪಾಠ ಮನನ
ಹೊಸಪೇಟೆ: ವಿದ್ಯಾರ್ಥಿಗಳು ಪಠ್ಯವಾಗಿರುವುದನ್ನೇ ನಾಟಕ ಮಾಡಿರುವುದರಿಂದ ಅದನ್ನು ನೋಡಿ ಪಾಠವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುನ್ಸಿಪಲ್ ಪದವಿ ಕಾಲೇಜು ಪ್ರಾಚಾರ್ಯ ಪನ್ನಂಗಧರ ಹೇಳಿದರು. ನಗರದ ಮುನ್ಸಿಪಲ್ ಪದವಿಪೂರ್ವ ಕಾಲೇಜಿನಲ್ಲಿ ಹಾಲ್ಕುರಿಕೆ ಥಿಯೇಟರ್ ಕಾಲೇಜು ರಂಗ ಪಯಣದ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ರಂಗ ಪ್ರದರ್ಶನ ಅರ್ಥ ಮಾಡಿಕೊಂಡರೆ ಪಠ್ಯ ಸುಲಭವಾಗುತ್ತದೆ. ಪಠ್ಯಪುಸ್ತಕದಲ್ಲಿರುವ ನಾಟಕಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸುವ ಮೂಲಕ ರಂಗ ಚಟುವಟಿಕೆಯನ್ನು ಜೀವಂತವಾಗಿಡಲು ಸಾಧ್ಯ. ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಭಾವೈಕ್ಯತಾ ವೇದಿಕೆ ಸಂಚಾಲಕ ಪಿ. ಅಬ್ದುಲ್ ಮಾತನಾಡಿ, ಶಿಕ್ಷಣದಲ್ಲಿ ರಂಗಭೂಮಿ ಎಂಬ ಪರಿಕಲ್ಪನೆ ಇತ್ತೀಚಿಗೆ ಜನಪ್ರಿಯವಾಗುತ್ತದೆ. ರಂಗದ ಮೂಲಕ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯ ಎಂದು ಸಾಬೀತಾಗಿದೆ. ಹಾಲ್ಕುರಿಕೆ ಶಿವಶಂಕರ್ ಬೂದುಗುಂಪಾ ಕ್ರಾಸ್ ಬಳಿ ರಂಗಭೂಮಿ ಚಟುವಟಿಕೆ ನಡೆಸುತ್ತಿರುವುದು ಹಾಗೂ ಶಾಲಾ ಪಠ್ಯಪುಸ್ತಕವನ್ನೇ ರಂಗಭೂಮಿಗೆ ತಂದಿರುವುದು ಶ್ಲಾಘನೀಯ ಎಂದರು. ಕಾಲೇಜಿನ ಉಪನ್ಯಾಸಕ ನಜೀರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಟಕ ನಿರ್ದೇಶಕ ಹಾಲ್ಕುರಿಕೆ ಶಿವಶಂಕರ್ ಭಾಗವಹಿಸಿದ್ದರು. ಉಪನ್ಯಾಸಕ ಶೀನು ನಾಡೊಳ್ಳಿ ಸ್ವಾಗತಿಸಿ, ನಿರೂಪಿಸಿದರು. ಪಿಯುಸಿ ಪಠ್ಯವಾದ ಡಾ. ಚಂದ್ರಶೇಖರ್ ಕಂಬಾರರ ಬೆಪ್ಪುತ್ಕಡಿ ಬೋಳೆ ಶಂಕರ ಹಾಗೂ ಡಾ. ಸಿದ್ದಲಿಂಗಯ್ಯ ಅವರ ಏಕಲವ್ಯ ನಾಟಕಗಳು ಪ್ರದರ್ಶನಗೊಂಡವು.