ಬಳ್ಳಾರಿಗೆ ರಾಘವರಿಂದ ವಿಶಿಷ್ಟ ಹೆಸರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 5
ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ಬಳ್ಳಾರಿ ಜಿಲ್ಲೆ ವಿಶಿಷ್ಟ ಸ್ಥಾನ ಹೊಂದಿದ್ದು, ರಾಘವರಂತಹ ಉತ್ತಮ ಕಲಾವಿದರನ್ನು ಕೊಟ್ಟಂತಹ ಮಹತ್ವದ ಜಿಲ್ಲೆಯಾಗಿದೆ ಎಂದು ಖ್ಯಾತ ರಂಗಕರ್ಮಿ ಹೂಲಿ ಶೇಖರ್ ಹೇಳಿದರು.
ಬಳ್ಳಾರಿಯ ರಾಘವ ಮೆಮೋರಿಯಲ್ ಅಸೋಸಿಯೇಷನ್ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 133ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ ಕನ್ನಡ ಮತ್ತು ತೆಲುಗು ಸಂಸ್ಕೃತಿಯ ವಿಶಿಷ್ಟ ಸಮ್ಮಿಶ್ರಣದಿಂದ ನಿರ್ಮಿತವಾದ ಪ್ರದೇಶವಾಗಿದ್ದು, ಭಾಷಾ ಸೌಹಾರ್ದತೆ, ಸಾಂಸ್ಕೃತಿಕ ವಿಭಿನ್ನತೆಯಿಂದ ಹೆಸರಾಗಿದೆ. ಜತೆಗೆ ಬಳ್ಳಾರಿ ಕೇವಲ ಗಣಿಧಣಿಗಳ ಬೀಡಲ್ಲ ರಂಗ ಚಟುವಟಿಕೆಯ ಆಗರವೂ ಹೌದು. ರಂಗಭೂಮಿ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2013ನೇ ಸಾಲಿನ ರಾಘವ ಪ್ರಶಸ್ತಿಯನ್ನು ನೀಡಲಾಯಿತು. ಬೆಂಗಳೂರಿನ ಬಸವರಾಜ್ ಪಂಚಗಲ್ ರಾಜ್ಯ ಮಟ್ಟದ ರಾಘವ ಪ್ರಶಸ್ತಿಗೆ ಭಾಜನರಾದರು. ಗೆಣಕಿಹಾಳ್‌ನ ತಿಮ್ಮನಗೌಡ, ಉಬ್ಬಲಗಂಡಿಯ ವೀರೇಶಪ್ಪ, ಕೂಡ್ಲಿಗಿಯ ಬ್ಯಾಳಿ ಶಿವಪ್ರಸಾದ ಗೌಡ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾದರು. ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ. ಚೆನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಾಂಜನೇಯುಲು, ರಮೇಶಗೌಡ ಪಾಟೀಲ್, ರಾಘವ ಅವರ ಮರಿಮೊಮ್ಮಗ ಮಹೇಂದ್ರನಾಥ್, ಧನಂಜಯ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅನಂತರ ಪಂಚಲಿಂಗೇಶ್ವರ ನಾಟ್ಯ ಸಂಘ, ಲಿಂಗಾಪುರ, ಬಾಗಲಕೋಟೆ ಜಿಲ್ಲೆ ಇವರಿಂದ ನಗುನಗುತಾ ನಲಿ ನಾಟಕ ಪ್ರದರ್ಶನಗೊಂಡಿತು.