ಕಣ್ವಕುಪ್ಪೆ: ಇಂದಿನಿಂದ 41 ದಿನ ಇಷ್ಟಲಿಂಗ ಪೂಜೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 6
ಲೋಕ ಕಲ್ಯಾಣಾರ್ಥ ಸಮೀಪದ ಜಗಳೂರು ತಾಲೂಕಿನ ತಪೋ ಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಕೇದಾರದ 1008 ಜಗದ್ಗುರು ರಾಹುಲ ಭೀಮಾಶಂಕರಲಿಂಗ ಶಿವಾಚಾರ್ಯರ ಸಂಗೀತ ಯುಕ್ತ ಇಷ್ಟಲಿಂಗ ಮಹಾಪೂಜಾದ ತಪೋನುಷ್ಠಾನದ ಕಾರ್ಯಕ್ರಮ ಆ. 7ರಿಂದ 41 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದ ನಿಮಿತ್ತ ಕೊಟ್ಟೂರಿನ ಗಚ್ಚಿನ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ದ್ವಾದಶ ಚತುರ್ಲಿಂಗಗಳ ಪವಿತ್ರ ಕ್ಷೇತ್ರದ ಮಹಾ ತಪಸ್ವಿ ಕೇದಾರ ಜಗದ್ಗುರುಗಳ ಈ ಮಹಾನುಷ್ಠಾನ ಪೂಜೆಯ ಕೈಂಕರ್ಯ ಕಣ್ವಕುಪ್ಪೆ ಗವಿಮಠದಲ್ಲಿ ನಡೆಸಬೇಕೆಂಬ ಭಕ್ತರ ಇಚ್ಛೆಯಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇದಾರ ಜಗದ್ಗುರುಗಳ 41 ದಿನದ ಇಷ್ಟಲಿಂಗ ಪೂಜಾನುಷ್ಠಾನ ಆ. 7ರಿಂದ ಆರಂಭಗೊಂಡು ಸೆಪ್ಬಂಬರ್ 15ರ ವರೆಗೆ ಪ್ರತಿ ನಿತ್ಯ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ ಎಂದರು.
ಪ್ರತಿದಿನ ಸಂಜೆ 6ರಿಂದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮ ಪ್ರವಚನ ಏರ್ಪಡಿಸಲಾಗಿದೆ. ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಜಗದ್ಗುರುಗಳ ಪೂಜೆ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಜಾತ್ಯತೀತ ಮನೋಭಾವನೆ ಇರಿಸಿಕೊಂಡು ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಎಂ.ಎಂ.ಜೆ. ಸ್ವರೂಪಾನಂದ, ಟಿ. ನೀಲಕಂಠಯ್ಯ, ಕಡ್ಲಿ ವೀರಣ್ಣ, ಆರ್.ಎಂ. ಗುರುಬಸವಸ್ವಾಮಿ, ಬನ್ನಿಹಟ್ಟಿ ವೀರೇಶ್ ಮತ್ತಿತರರಿದ್ದರು.