ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೀವ ಬೆದರಿಕೆ: ವಿವಿಗೆ ಸಿಸಿ ಕ್ಯಾಮೆರಾ ಅಳವಡಿಕೆ

Vishwanath S
Updated On : 7 Aug 2013, 10:56 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 6
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಸಿಸಿ ಕ್ಯಾಮೆರಾಗಳ ಕಣ್ಗಾವಲು.
ವಿವಿ ಆವರಣದಲ್ಲಿ 5 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಯಾವುದೇ ಅವ್ಯವಹಾರಗಳು ನಡೆಯುತ್ತವೆ ಎಂದಲ್ಲ. ಆದರೆ, ವಿವಿಯಲ್ಲಿ ಕುಲಪತಿ, ಕುಲಸಚಿವರ ಆಂತರಿಕ ಕಚ್ಚಾಟದಿಂದ ಯಾವುದೇ ಕಿಡಿಗೇಡಿಗಳು ಅನಗತ್ಯ ಕಿರುಕುಳ ನೀಡದಿರಲಿ ಎನ್ನುವ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಹಲವು ದಿನಗಳಿಂದ ವಿವಿ ಕುಲಪತಿ, ಕುಲಸಚಿವರ ಮಧ್ಯದ ಗೊಂದಲ ಹೆಚ್ಚಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಸಚಿವರನ್ನು ಮಾತೃ ವಿವಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡುವ  ನಿರ್ಧರಿಸುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದರು. ವರ್ಗಾವಣೆಯ ಆದೇಶ ಹೊರಡಿಸಿದ ಮೇಲೆ ಕುಲಸಚಿವರ ಕಚೇರಿಗೆ ಬೀಗ ಹಾಕಲಾಗಿತ್ತು. ಸಿಂಡಿಕೇಟ್ ಸಭೆಯ ನಿರ್ಧಾರಗಳನ್ನು ಬಾಗಿಲಿಗೆ ಅಂಟಿಸಲಾಗಿತ್ತು. ಆದರೆ ಕುಲಸಚಿವ ವಿಜಯಕುಮಾರ್ ಅವರು ಇಂತಹ ನಿರ್ಧಾರದಿಂದ ಬೇಸತ್ತು, ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಇದೀಗ ಕಾನೂನು ಹೋರಾಟದ ಚಿಂತನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
5 ಕ್ಯಾಮೆರಾ ಅಳವಡಿಕೆ: ಇಂತಹ ಬೆಳವಣಿಗೆ ಮಧ್ಯೆ ಕುಲಪತಿ ಮಂಜಪ್ಪ ಹೊಸಮನಿ ಅವರು ವಿಶ್ವವಿದ್ಯಾಲಯದಲ್ಲಿ ಯಾವುದೇ ಅಹಿತಕರ ಘಟನೆಗಳು, ಸಂಘಟನೆಗಳು ಪ್ರತಿಭಟನೆ ನಡೆಸಿ ಅವುಗಳಿಂದ ಅಹಿತಕರ ಘಟನೆಗಳು ನಡೆಯದಂತೆ ಕುಲಪತಿ ಕಚೇರಿ, ವಿಸಿ ಕಚೇರಿ ಮುಂಭಾಗ, ಕುಲಸಚಿವರ ಕಚೇರಿ, ಕಚೇರಿಯ ಮುಂಭಾಗ ಹಾಗೂ ವಿಶ್ವವಿದ್ಯಾಲಯ ಮುಂಭಾಗದಲ್ಲಿ 5 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೊಂದು ಕಡೆ ಕುಲಸಚಿವ ವಿಜಯ್‌ಕುಮಾರ್ ಅವರು ಉನ್ನತ ಶಿಕ್ಷಣ ಇಲಾಖೆಯ ಸಚಿವರ ಅಧೀನ ಕಾರ್ಯದರ್ಶಿಗಳ ಮುಂದೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯ ಪ್ರವೇಶಿಸದ ಉನ್ನತ ಶಿಕ್ಷಣ ಇಲಾಖೆ: ಇಷ್ಟೆಲ್ಲಾ ಗೊಂದಲಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದರೂ, ಉನ್ನತ ಶಿಕ್ಷಣ ಇಲಾಖೆಯು ತುರ್ತಾಗಿ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ಸುಧಾರಿಸಬಹುದಾಗಿತ್ತು. ಆದರೂ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರದೆ, ಮೌನಕ್ಕೆ ಶರಣಾಗಿದ್ದಾರೆ.
ಇನ್ನು ಮುಂದಾದರೂ, ಉನ್ನತ ಶಿಕ್ಷಣ ಇಲಾಖೆಯು ವಿವಿಯಲ್ಲಿ ನಡೆದಿರುವ ಗೊಂದಲಗಳ ಬಗ್ಗೆ ಎಚ್ಚರ ವಹಿಸಿ, ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಉತ್ತಮ ಉನ್ನತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎನ್ನುವುದು ಜನತೆ ಒತ್ತಾಸೆ.
ಜೀವ ಬೆದರಿಕೆ ಇದೆ..
ತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್‌ಸಿಂಗ್ ರಾಥೋಡ್ ಅವರಿಗೆ ಮನವಿ ಮಾಡಿದ್ದೇನೆ. ಇತ್ತೀಚೆಗೆ ಕೆಲವೊಂದು ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿತ್ತು. ಇನ್ನು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ವಿವಿಯಲ್ಲಿ ನಡೆಯಬಾರದು ಎನ್ನುವ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
- ಮಂಜಪ್ಪ ಹೊಸಮನಿ, ಕುಲಪತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement