ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರವಾಹದತ್ತ ಕಣ್ಣು ಹಾಯಿಸದ ಸಚಿವ

Vishwanath S
Updated On : 7 Aug 2013, 10:57 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 6
ಕಳೆದೊಂದು ವಾರದಿಂದ ಜೀವನದಿ ತುಂಗಭದ್ರೆ ಅಪಾಯ ಮಟ್ಟ ಮೀರಿ ತುಂಬಿ ಹರಿದು, ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತ, ನೂರಾರು ಎಕರೆ ಬೆಳೆ ನಾಶ ಸೇರಿದಂತೆ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಭೇಟಿ ನೀಡುವ ಗೋಜಿ ಹೋಗಿಲ್ಲ.
ಹೌದು, ಭಾನುವಾರ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೂವಿನಹಡಗಲಿ ಪಟ್ಟಣದಲ್ಲೇ ವಾಸವಾಗಿದ್ದರೂ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳತ್ತ ಗಮನ ಹರಿಸಿಲ್ಲ. ರೈತರು ಅಪಾರ ಪ್ರಮಾಣದ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಅವರಿಗೆ ಸಾಂತ್ವನ, ಧೈರ್ಯ ಹೇಳುವ ಮನಸ್ಸು ಸಚಿವರಿಗಿಲ್ಲ ಎಂಬ ಅಸಮಾಧಾನದ ಮಾತು ಕ್ಷೇತ್ರದ ತುಂಬೆಲ್ಲ ಕೇಳಿ ಬರುತ್ತಿದೆ.
ಮಲೆನಾಡು ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದ ತುಂಗಭದ್ರಾ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮ ನದಿ ತೀರದ ಹತ್ತಾರು ಗ್ರಾಮಗಳು ರಸ್ತೆ ಸಂಪರ್ಕ ಕಡಿತಗೊಂಡು 5-6 ದಿನಗಳಿಂದ ದ್ವೀಪದಂತೆ ನಿರ್ಮಾಣವಾಗಿವೆ. ಸ್ವಕ್ಷೇತ್ರದಲ್ಲೇ ಸಚಿವರಿದ್ದರೂ ತಮ್ಮನ್ನು ಆಯ್ಕೆ ಮಾಡಿದ ಜನರ ನೋವು ನಲಿವು ಆಲಿಸದಿರುವುದು ದುರಂತ. ಸಭೆ ಸಮಾರಂಭಗಳಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಉತ್ತರಾಧಿಕಾರಿಯಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಅವರ ಹೆಸರಿಗೆ ಕಳಂಕ ಬಾರದಂತೆ ಜನರ ಆಶೋತ್ತರಗಳನ್ನು ಈಡೇರಿಸುತ್ತೇನೆಂದು ಭಾಷಣ ಮಾಡಿದ ಸಚಿವರಿಗೆ ನದಿ ತೀರದ ಗ್ರಾಮಗಳತ್ತ ಏಕೆ ಗಮನ ಹರಿಸಿಲ್ಲ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.
ಒಕ್ಕೊರಲಿನ ಒತ್ತಾಯ: ಪ್ರತಿ ವರ್ಷ ತುಂಗಭದ್ರಾ ನದಿ ಪ್ರವಾಹಕ್ಕೆ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿರುವ ತಾಲೂಕಿನ ಹೂವಿನಹಡಗಲಿ- ಹೊನ್ನೂರು, ರಾಜವಾಳ ಅಲ್ಲಿಪುರ, ಅಲ್ಲಿಪುರ- ಮಾಗಳ, ಅಂಗೂರು- ಕೋಟಿಹಾಳು, ಹೊಸಹಳ್ಳಿ- ಅಂಗೂರು, ಹೊಸಹಳ್ಳಿ- ಮಾಗಳ, ಮಕರಬ್ಬಿ- ಬ್ಯಾಲಹುಣ್ಸಿ, ಬ್ಯಾಲಹುಣ್ಸಿ, ನಂದಿಗಾವಿ-ಹೊಳಲು ಗ್ರಾಮಗಳ ರಸ್ತೆ ಅಭಿವೃದ್ಧಿಯಾಗಿಲ್ಲ. ಸಂಪರ್ಕ ಸೇತುವೆಗಳು ತೀರಾ ತಳಮಟ್ಟಕ್ಕಿದ್ದು ಸಂಪರ್ಕ ಕಡಿತಗೊಳ್ಳುತ್ತಿವೆ. ಆದ್ದರಿಂದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಒಕ್ಕೊರಲಿನ ಒತ್ತಾಯ.
ನೀರು ಪಾಲಾದ ಬೆಳೆ: ನದಿ ತೀರದ ಹರವಿ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ಅಂಗೂರು, ಹೊಸಹಳ್ಳಿ, ಮಾಗಳ, ಕಾಗನೂರು, ಕೊಂಬಳಿ, ಮದಲಗಟ್ಟಿ, ಕಂದಗಲ್ಲು, ಪುರ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಬತ್ತ, ಮೆಕ್ಕೆಜೋಳ, ಹತ್ತಿ, ಶೇಂಗಾ, ಮಿಡಿಸೌತೆ, ಹೈಬ್ರೀಡ್ ಜೋಳ, ಕಬ್ಬು ಬೆಳೆಗಳಿಗೆ ನೀರು ನುಗ್ಗಿದೆ. 5-6 ದಿನಗಳಿಂದ ನದಿ ನೀರು ನಿಂತಿರುವ ಪರಿಣಾಮ ಬೆಳೆಗಳೆಲ್ಲಾ ಕೊಳೆತು ನಷ್ಟವಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೇ ಸ್ವಕ್ಷೇತ್ರದ ಜನತೆಯ ಕಷ್ಟ ಅರ್ಥವಾಗಿಲ್ಲ, ಇನ್ನು ಒಂದು ಇಲಾಖೆಯನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದೇ ಕ್ಷೇತ್ರದ ಜನತೆಗೆ ಬಹುದೊಡ್ಡ ಪ್ರಶ್ನೆಯಾಗಿದೆ.
ಸೌಜನ್ಯಕ್ಕಾದರೂ ಬರಲಿಲ್ಲ...
ನದಿ ತೀರದ ಗ್ರಾಮಸ್ಥರು ಪ್ರವಾಹದ ಭೀತಿಯಲ್ಲಿದ್ದರೂ ಸಚಿವರು ಬಂದು ಭೇಟಿ ಮಾಡಿಲ್ಲ. ರೈತರಿಗೆ ಪರಿಹಾರದ ಭರವಸೆಯನ್ನು ನೀಡಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ರಸ್ತೆ ಸಂಪರ್ಕಗಳು ಪದೇ ಪದೇ ಕಡಿತಗೊಂಡು ಗ್ರಾಮಗಳು ದ್ವೀಪದಂತೆ ಆಗಿ ಯಾವ ಕಡೆಗೂ ಹೋಗಲಾರದ ಸ್ಥಿತಿ ಇದೆ. ಈ ಕೂಡಲೇ ಸಚಿವರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು.
- ಹರವಿ ಮಹೇಶಪ್ಪ, ಮಕರಬ್ಬಿ ಮಲ್ಲನಗೌಡ

-ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement