16: ಕಾಂಗ್ರೆಸ್ ಸಚಿವ, ಶಾಸಕರಿಗೆ ಸನ್ಮಾನ
ಹಗರಿಬೊಮ್ಮನಹಳ್ಳಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸಚಿವ, ಶಾಸಕರಿಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಂದ ಸನ್ಮಾನ ಸಮಾರಂಭವನ್ನು ಆ. 16ರಂದು ಆಯೋಜಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಎಲ್. ಮಾರೆಣ್ಣ, ಹೆಗ್ಡಾಳ ರಾಮಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಕ್ಷೇತ್ರ ಮಟ್ಟದಲ್ಲಿ ನಡೆಯುತ್ತಿರುವ ಈ ಸಮಾರಂಭವನ್ನು ಪಕ್ಷದ ಸಂಘಟನೆ ದೃಷ್ಟಿಯಿಂದ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್, ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಸಂಡೂರು ಶಾಸಕ ಈ. ತುಕಾರಾಂ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಇವರನ್ನು ಕ್ಷೇತ್ರದ ಕಾರ್ಯಕರ್ತರ ವತಿಯಿಂದ ಸನ್ಮಾನಿಸಲಾಗುವುದು. ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎನ್.ಎಂ. ನಬಿ, ಎಂ. ದಿವಾಕರಬಾಬು, ಮಾಜಿ ಸಂಸದರಾದ ಕೆ.ಸಿ. ಕೊಂಡಯ್ಯ, ಎನ್.ವೈ. ಹನುಮಂತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದು, 5 ಸಾವಿರಕ್ಕೂ ಹೆಟ್ಟು ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕ್ಷೇತ್ರಾಭಿವೃದ್ಧಿಗೆ ಮನವಿ ಅರ್ಪಣೆ: ಕ್ಷೇತ್ರದ ಜೀವನಾಡಿ ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಗೆ ಮತ್ತು ಹೊಸಪೇಟೆ- ಹಗರಿಬೊಮ್ಮನಹಳ್ಳಿ- ಕೊಟ್ಟೂರು- ಹರಿಹರ ರೈಲು ಮಾರ್ಗದ ಆರಂಭಕ್ಕೆ ಒತ್ತಾಯಿಸುವ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಏತನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವ ಮನವಿಯನ್ನು ಸಚಿವರು, ಶಾಸಕರಿಗೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಕಲ್ಯಾಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ, ಯೋಜನೆಗಳ ಜಾರಿಗೆ ಪ್ರಯತ್ನಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಕಾನೂನು ಘಟಕದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಜಿಪಂ ಮಾಜಿ ಸದಸ್ಯ ಉಲುವತ್ತಿ ಸೋಮಲಿಂಗಪ್ಪ, ಪಿ. ಛತ್ರಪ್ಪ, ಅಂಬಾಡಿ ನಾಗರಾಜ, ಬಲ್ಲಾಹುಣ್ಸಿ ರಾಮಣ್ಣ, ಎಚ್.ಪಿ. ಶಿವಶಂಕರಗೌಡ, ಮಾಲ್ವಿ ಚನ್ನಬಸಪ್ಪ, ಪೂರ್ಯನಾಯ್ಕ, ಬಿ. ಹನುಮಂತಪ್ಪ, ಬಾರಿಕರ ನಿಂಗಪ್ಪ, ವಿ. ಸೋಮಪ್ಪ, ತಟ್ಟಿ ರಾಘವೇಂದ್ರ ಇದ್ದರು.