ಗಾಂಜಾ ಮಾರಾಟ; ಇಬ್ಬರ ಸೆರೆ
ಗುಲ್ಬರ್ಗ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುವ ಹಾಗೂ ಮಟಕಾ ಚೀಟಿ ಬರೆಯುವುದರಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 68,500 ನಗದು, 500 ಗ್ರಾಂ ಗಾಂಜಾ, 1 ಮೋಟರ್ ಸೈಕಲ್, 2 ಮೊಬೈಲ್, 2 ಪೆನ್ ಜಪ್ತಿ ಮಾಡಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾದವರನ್ನು ನಗರದ ಗಾಜೀಪೂರ ನಿವಾಸಿ ಭೂಪಾಲತೇಗನೂರ್ ಗ್ರಾಮದ ಆಟೋ ಚಾಲಕ ಬಸಯ್ಯ ಬಂಡಯ್ಯ ಸ್ವಾಮಿ (44) ಹಾಗೂ ನ್ಯೂ ರಾಘವೇಂದ್ರ ಕಾಲೋನಿ ನಿವಾಸಿ ಜೆಸ್ಕಾಂ ನಿವೃತ್ತ ನೌಕರ ಮಲ್ಕಪ್ಪ ಮಾಣಿಕಪ್ಪ ದಿವಟಗಿ ಎಂದು ಗುರುತಿಸಲಾಗಿದೆ.
ಡಿಸಿಐಬಿ ಪೊಲೀಸರು ಈ ಮಾಹಿತಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಎಸ್ಪಿ ಅಮಿತ್ ಸಿಂಗ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಎ ವಿಭಾಗದ ಉದಯ ಬೇವಿನಮರದ ಅವರ ನೇತೃತ್ವದಲ್ಲಿ, ಡಿಸಿಐಬಿ ಪಿಎಸ್ಐ ಎಸ್.ಎಸ್. ಹುಲ್ಲೂರ್, ಬ್ರಹ್ಮಪುರ ಠಾಣೆ ಪಿಐ ಶರಣಬಸವೇಶ್ವರ ಭಜಂತ್ರಿ, ಡಿಸಿಐಬಿ ಪಿಎಸ್ಐ ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಭಾಗವಹಿಸಿದ್ದರು.
ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಐಬಿ ಪಿಎಸ್ಐ ಮಹಾಂತೇಶ ಪಾಟೀಲ್ 'ಕನ್ನಡಪ್ರಭ' ಜೊತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.