ಸಣ್ಣ ರೈತರ ಅಭಿವೃದ್ಧಿಗೆ ಒಲವು; ಒಪ್ಪಿಗೆ
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಆ.7
ಸಣ್ಣ ರೈತರ ಅಭಿವೃದ್ಧಿಗಾಗಿ ರೈತರ ಜಮೀನಿನಲ್ಲಿ ಕೆಲ ಕಾಮಗಾರಿಗಳು ಕೈಗೊಳ್ಳಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
ತಾಲೂಕಿನ ತೆಂಗಳಿ ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2013-14ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿಶೇಷ ಗ್ರಾಮಸಭೆ ನಡೆಸಿ 5ಎಕರೆ ಜಮೀನು ಹೊಂದಿರುವ ಸಣ್ಣ ರೈತರ ಜಮೀನುಗಳಲ್ಲಿ ಕಾಮಗಾರಿ ಕೈಗೊಳ್ಳಲು ಫಲಾನುಭವಿಗಳ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಚೆಕ್ ಡ್ಯಾಮ್, ಕೃಷಿ ಹೊಂಡಾ, ಕ್ಷೇತ್ರ ಬದು, ತಡೆ ಗೋಡೆ, ಭೂಮಿ ಸಮತೋಲನಾ ಸೇರಿದಂತೆ ವಿವಿಧ ಕಾಮಗಾರಿಗಳು ಕೈಗೊಳ್ಳಲಾಗುವುದು. ನೈರ್ಮಲ್ಯ ಭಾರತ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯಕ್ಕಾಗಿ 500 ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಮಾಡಲಾಗುವುದು ಎಂದು ಹೇಳಿದರು.
13ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳು ಅನುಮೋದನೆ ಪಡೆದ ನಂತರ ಶೀಘ್ರ ಆರಂಭಿಸಲಾಗುವುದು. ಮಳೆಗಾಲ ಪ್ರಾರಂಭವಾಗಿರುವುದರಿಂದ ಎಲ್ಲ ಗ್ರಾಮಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಶುದ್ಧವಾದ ನೀರು ಜನತೆಗೆ ಕಲ್ಪಿಸಬೇಕೆಂದು ಪಿಡಿಒಗೆ ಸೂಚಿಸಿದರು.
ಪಿಡಿಒ ಕಾವೇರಿ ಗ್ರಾಮಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಮಹಿಮೂದಾಬಿ ಮುಲ್ಲಾ, ಸದಸ್ಯರಾದ ಬಸವರಾಜ ತುಪ್ಪದ, ಪರಮೇಶ್ವರ ಬೆನಕಿನಪಳ್ಳಿ, ಗಿರಿಮಲ್ಲಪ್ಪ ಭೂಸನ, ಖಲೀಲಮಿಯ್ಯ, ಮಲ್ಲಿಕಾರ್ಜುನ ನಂದೂರ, ಮಹಿಬೂಬ್ ಪಟೇಲ್, ಶ್ರೀದೇವಿ ದಾಖಲ್, ಮಂಜೂಳಾ ಕೊಡದೂರ, ಬಸಮ್ಮ ಕೊರಬಾ, ಮಾಣಿಕಮ್ಮ ನಿಂಗದೇ, ಭೀಮಾಶಂಕರ, ಗುರಪ್ಪ ಹಡಪದ, ಸಹಾಯಕ ಕೃಷಿ ಅಧಿಕಾರಿ ಸಂಗಣ್ಣಗೌಡ ಪಾಟೀಲ್ ಉಪಸ್ಥಿತರಿದ್ದರು.
ತೆಳಗೇರಿ ಮರುಳ ಸಿದ್ದೇಶ್ವರನಿಗೆ ವಿಶೇಷ ಅಲಂಕಾರ
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಆ.7
ಪಟ್ಟಣದ ತೆಳಗೇರಿಯ ಮರುಳ ಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಮೂರ್ತಿಗೆ ಬುಧವಾರ ಹಾಲಿನ ವಿಶೇಷ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಯಿತು.
ಬಟ್ಟಲುಗಳಲ್ಲಿ ಹಾಲು ತುಂಬಿ ಮೂರ್ತಿ ಸುತ್ತ ಇಟ್ಟು ದೀಪ ಹಚ್ಚುವ ಮೂಲಕ ಅಲಂಕಾರಗೊಳಿಸಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಜನಸ್ತೋಮ ಸೇರಿತ್ತು. ಅರ್ಚಕ ಕರಬಸಯ್ಯ ಶಾಸ್ತ್ರೀ ಮಂತ್ರ ಪಠಣೆಯೊಂದಿಗೆ ಪೂಜೆ ಮಾಡಿದರು. ಶ್ರಾವಣ ಮಾಸ ನಿಮಿತ್ತ ಒಂದು ತಿಂಗಳವರೆಗೆ ಪ್ರತಿದಿನ ಸಿದ್ದೇಶ್ವರ ಮೂರ್ತಿಗೆ ಮೊಸರು, ತುಪ್ಪ, ಜೇನು ತುಪ್ಪ, ಸಕ್ಕರೆ, ವಿಭೂತಿ, ಕುಂಕುಮ, ಅಕ್ಷತಾ, ರುದ್ರಾಕ್ಷಿ, ಕೊಬ್ಬರಿ, ಅಡಕಿ, ಬಾದಾಮಿ, ಉತ್ತತ್ತಿ, ಖಾಜು, ಕಿಸಿಮಸಿ ಸೇರಿದಂತೆ ಬಗೆ ಬಗೆಯ ಅಲಂಕಾರ ಹಾಗೂ ವಿಶೇಷ ಪೂಜೆ ನಡೆಯಲಿದೆ.
ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಸೂರ್ಯಕಾಂತ ಹಾವೇರಿ, ಅಧ್ಯಕ್ಷ ಬಸವರಾಜ ಕಾಳಗಿ, ಅಂಬರೀಶ ಸುಲೇಗಾಂವ, ಬಸವರಾಜ ಮಾರಡಗಿ, ಭೀಮರಾವ ಧರಪುರ, ಸೋಮಶೇಖರ ಮುತ್ತಂಗಿ ಹಾಗೂ ಅಕ್ಕನ ಬಳಗದವರು ಇದ್ದರು.