ಸೋಲು, ಗೆಲವನ್ನು ಸಮಾನವಾಗಿ ಸ್ವೀಕರಿಸಿ: ದೊಡ್ಡಗೌಡ
ಕುರುಗೋಡು: ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ, ಆಸಕ್ತಿಯಿಂದ ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳು ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಿರುಗುಪ್ಪ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದೊಡ್ಡನಗೌಡ ತಿಳಿಸಿದರು.
ಪಟ್ಟಣ ಸಮೀಪದ ಕೊಂಚಿಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗುತ್ತಾರೆ. ಪಠ್ಯ ಪುಸ್ತಕ ಓದಿನ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುವುದು ಮುಖ್ಯ ಎಂದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕ್ರೀಡಾತ್ಮಕವಾಗಿ ನಗರ ಪ್ರದೇಶದ ಯುವಕರಿಗೆ ಮಾದರಿಯಾಗಬೇಕು. ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು ಹತ್ತು ವಲಯದಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿದ್ದು, ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಗ್ರಾಮದ ಹಿರಿಯ ಮುಖಂಡ ಸಿದ್ದನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಮನೋಭಾವ ಕಡಿಮೆಯಾಗುತ್ತಿದ್ದು, ಶಿಕ್ಷಕರು ಹಾಗೂ ಕ್ರೀಡಾ ಇಲಾಖೆ ಮುತುವರ್ಜಿವಹಿಸಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಾಮಾಜಿಕ ಕಳಕಳಿ ಹೊಂದಿರಬೇಕೆಂದು ತಿಳಿಸಿದರು.
ತಾಪಂ ಸದಸ್ಯ ಚಂದ್ರಮೌಳಿಸ್ವಾಮಿ, ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾದ್ಯಕ್ಷ ಸುಕೂರಸಾಬ್, ಶಿಕ್ಷಣ ಸಂಯೋಜಕ ಸುರೇಶ್, ಸಿಆರ್‌ಪಿಯ ಮೋಹನ್, ಎಸ್‌ಡಿಎಂಸಿ ಅಧ್ಯಕ್ಷ ಕೆ. ಬಸವರಾಜ್, ತಾಪಂ ಮಾಜಿ ಅಧ್ಯಕ್ಷ ಮುದ್ದುವೀರಪ್ಪ, ವೀರೇಶ್, ದೊಡ್ಡಬಸವ, ಹೊನ್ನೂರಪ್ಪ ಇತರರು ಇದ್ದರು.
ಸಿರಿಗೇರಿ, ಮುದ್ದಟನೂರು, ಹಾವಿನಾಳ್, ಕೊಂಚಿಗೇರಿ, ಚನ್ನಪಟ್ನ, ಗುಂಡಿಗನೂರ್ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಸೇರಿ ಒಟ್ಟು 12 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವ ಪದಕ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಕ ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.