ಸೌಹಾರ್ದಯುತ ರಂಜಾನ್ ಆಚರಣೆಗೆ ಡಿಸಿ ಕರೆ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.7
ಮುಂಬರುವ ರಂಜಾನ್ ಹಬ್ಬವನ್ನು ಜಿಲ್ಲೆಯಾದ್ಯಂತ ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಜಿಲ್ಲೆಯ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಅವರು ಕರೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಂಜಾನ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎರಡ್ಮೂರು ವರ್ಷದಲ್ಲಿ ಗುಲ್ಬರ್ಗದಲ್ಲಿ ಜರುಗಿದ ಮಹತ್ವದ ಕಾರ್ಯಗಳು ಶಾಂತಿ ಹಾಗೂ ಸೌಹಾರ್ದಯುತವಾಗಿ ಜರುಗಿವೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಶಾಂತಿ ಕಾಪಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯರು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೀತ್ಸಿಂಗ್ ಮಾತನಾಡಿ, ರಂಜಾನ್ ಹಿನ್ನೆಲೆಯಲ್ಲಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಕೆಲವು ಕಡೆ ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ, ಸಮಾಜದ ಹಿರಿಯರು ಮುಂದಾಳತ್ವ ವಹಿಸಿ, ಅವುಗಳನ್ನು ಬಗೆಹರಿಸಬೇಕೆ ಹೊರತು ಯಾವುದೇ ಕಾರಣಕ್ಕೂ ಅದನ್ನು ಪ್ರಚೋದಿಸಬಾರದು ಎಂದು ಸಲಹೆ ನೀಡಿದರು.
ಬಂದೋಬಸ್ತ್ನಲ್ಲಿಯೂ ಇಂತಹ ಕಡೆ ಗಮನಹರಿಸಲಾಗುವುದು. ಈ ನಿಟ್ಟಿನಲ್ಲಿ ಕಳೆದ ಬಾರಿ ಕೈಗೊಳ್ಳಲಾಗಿದ್ದ ಪೊಲೀಸ್ ಬಂದೋಬಸ್ತನ್ನು ಅವಲೋಕಿಸಿ ವ್ಯವಸ್ಥೆಯನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.
ಹಬ್ಬಕ್ಕೆ ಸೂಕ್ತ ವ್ಯವಸ್ಥೆ: ಮುಂಬರುವ ರಂಜಾನ್ ಹಬ್ಬಕ್ಕೆ ನಗರದ ಎಲ್ಲ ಬಡಾವಣೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ನೀರು ಮತ್ತು ಒಳಚರಂಡಿ ಅಧಿಕಾರಿ ವಿಜಯಕುಮಾರ್ ಅವರಿಗೆ ಸೂಚನೆ ನೀಡಿದರು.
ಕಸವನ್ನು ಅಂದೇ ಸ್ವಚ್ಛಗೊಳಿಸಬೇಕು. ಹಬ್ಬದ ದಿನದಂದು ಕಸದ ಪ್ರಮಾಣ ಹೆಚ್ಚಿರುತ್ತದೆ. ಪಾಲಿಕೆಯವರು ಇದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಬೇಕು. ನಗರದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಜಲ್ಲಿಕಲ್ಲು ಹಾಗೂ ಮುರಮನ್ನು ಹಾಕಿ ಮುಚ್ಚುವ ವ್ಯವಸ್ಥೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಕಟ್ಟಿಮನಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಚಾಂದ್ ಕೀ ರಾತ್: ರಂಜಾನ್ ಹಬ್ಬದ ಚಂದ್ರನನ್ನು ನೋಡುವ ರಾತ್ರಿಯಂದು ಜೆಸ್ಕಾಂ ವಿದ್ಯುತ್ ಕಡಿಗೊಳಿಸಬಾರದು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಗಣ್ಯರು, ವಿವಿಧ ಸಮಾಜದ ಹಿರಿಯರು, ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶೀನಾಥ ತಳಕೇರಿ ಹಾಗೂ ಉಪವಿಭಾಗಾಧಿಕಾರಿ ಹರ್ಷಾ ಉಪಸ್ಥಿತರಿದ್ದರು.
ತರಾಟೆ...
ಪವಿತ್ರ ರಂಜಾನ್ ತಿಂಗಳು ಮುಸ್ಲಿಂ ಬಾಂಧವರಿಗೆ ತುಂಬ ಮಹತ್ವದ್ದು. ಆದರೆ ಇದೇ ವೇಳೆ ಸುಳ್ಳು ಹೇಳಿ ತಾವೂ ಮುಸಲ್ಮಾಮರು ಎಂದು ಪೋಸು ಕೊಡುತ್ತ ಸಾರ್ವಜನಿಕವಾಗಿ ಕುಳಿತುಕೊಂಡು ಜನರನ್ನು ಆಕರ್ಷಿಸುತ್ತ ಹಣ ವಸೂಲಿಗೆ ಮುಂದಾಗಿದ್ದವರನ್ನು ಸಾರ್ವಜನಿಕರೇ ತರಾಟೆಗೆ ತೆಗೆದುಕೊಂಡರು.
ಶಹಾಬಾದ್: ರಂಜಾನ್ ನಿಮಿತ್ತ ಶಾಂತಿಸಭೆ
ಶಹಾಬಾದ್: ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ರಂಜಾನ್ ನಿಮಿತ್ತ ಸಾರ್ವಜನಿಕ ಶಾಂತಿಸಭೆಯನ್ನು ಸಿಪಿಐ ಶರಣಪ್ಪ ಹಿಪ್ಪರಗಿ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ರಘು ಎನ್. ನಗರದಲ್ಲಿ ಮುಸ್ಲಿಮರು ಆಚರಿಸುವ ರಂಜಾನ್ ಹಬ್ಬವನ್ನು ಶಾಂತಿ, ಸೌಹಾರ್ಧಯುತವಾಗಿ ಎಲ್ಲರು ಸೇರಿ ಆಚರಿಸಲು ಕರೆ ನೀಡಿದರು.
ಹಬ್ಬದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಸಮುದಾಯದವರು ಎಚ್ಚರಿಕೆ ವಹಿಸಿಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಪರಸ್ಪರ ಸಮಾಲೋಚನೆ ನಡೆಸಿ ಸ್ಥಳದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು.
ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೃಷ್ಣಪ್ಪ ಕರಣಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಎಂ.ಎ. ರಶೀದ್, ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಸದಸ್ಯರಾದ ಶ್ಯಾಮ್ ದಂಡಗುಲಕರ್, ಶರಣು ಪಗಲಾಪುರ, ಕುಮಾರ್ ಚವ್ಹಾಣ, ಬಿಜೆಪಿ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಗ್ರಾಪಂ ಸದಸ್ಯರಾದ ಮುನ್ನಾ ಪಟೇಲ್, ಶಿವುಕುಮಾರ್, ಎಎಸ್ಐ ಚಂದ್ರಕಾಂತ, ಪಿಸಿ ಗುಂಡಪ್ಪ, ಯಾದವ ರಾಠೋಡ, ವೀರಭದ್ರಪ್ಪ, ವೆಂಕಟೇಶ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.