ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಒಳನಾಡು ಜಲಸಾರಿಗೆ ಸಚಿವರ ಪ್ರವಾಸ

Vishwanath S
Updated On : 9 Aug 2013, 11:25 am

ಬಳ್ಳಾರಿ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ ಆ. 12ರಂದು ಬೆಳಗ್ಗೆ 11.30ಕ್ಕೆ ಹೊಸಪೇಟೆಯ ಮುದ್ದಾಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಧ್ಯಾಹ್ನ 3 ಗಂಟೆಗೆ ಗುಲ್ಬರ್ಗಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಟೋ ಡಿಕ್ಕಿ: ವೃದ್ಧೆ ಸಾವು
ಬಳ್ಳಾರಿ: ಆಟೋವೊಂದು ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೋರ್ವಳು ಮೃತಪಟ್ಟ ಘಟನೆ ತಾಲೂಕಿನ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಗುಗ್ಗರಹಟ್ಟಿ ಗ್ರಾಮದ ಈರಮ್ಮ (75) ಎಂದು ಗುರುತಿಸಲಾಗಿದೆ. ಮಂಗಳವಾರದಂದು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಈರಮ್ಮಳಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಳು. ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಪಾದಚಾರಿ ಸಾವು
ಬಳ್ಳಾರಿ: ದಾರಿಹೋಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೃಷ್ಣನಗರ ಕ್ಯಾಂಪಿನಲ್ಲಿ ನಡೆದಿದೆ. ಮೃತನನ್ನು ಕೃಷ್ಣನಗರ ಕ್ಯಾಂಪಿನ ಬಸವರಾಜ್ ಅಲಿಯಾಸ್ ರಾಜೇಶ್ (30) ಎನ್ನಲಾಗಿದೆ. ಈತನು ಜು. 31ರ ರಾತ್ರಿ 10 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ ಮೃತಪಟ್ಟಿದ್ದಾನೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು
ಬಳ್ಳಾರಿ: ಬೈಕ್‌ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಗರದ ಜೈನ್ ಮಾರುಕಟ್ಟೆ ಸಮೀಪದಲ್ಲಿ ನಡೆದಿದೆ. ಮೃತನು ದೇವಿನಗರದ ನಾಗೇಂದ್ರ (40). ಈತನು ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಜೈನ್ ಮಾರ್ಕೆಟ್ ಸಮೀಪದದಲ್ಲಿ ಹೋಗುತ್ತಿರುವಾಗ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ, ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇನಿನ ಪುಡಿ ಸೇವಿಸಿ ಆತ್ಮಹತ್ಯೆ
ಕೊಟ್ಟೂರು: ಬುದ್ಧಿಮಾಂದ್ಯ ಮಹಿಳೆ ವಿಷಯುಕ್ತ ಹೇನಿನ ಪುಡಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ. ಇಲ್ಲಿನ ಮಡ್ಡೇರ ಓಣಿಯ ಜುಬೇದಾ ಹೊನ್ನೂರು ಸಾಬ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಬುಧವಾರ ಸಂಜೆ ಮನೆಯಲ್ಲಿದ್ದ ಹೇನಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದು ಒದ್ದಾಡತೊಡಗಿದ್ದಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗೆಂದು ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗೆಂದು ಕೂಡ್ಲಿಗಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಜುಬೇದಾ ಸಾವನ್ನಪ್ಪಿದ್ದಾಳೆ. ಈ ಕುರಿತು ಖಾಜಾಹುಸೇನ್ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪಿಎಸ್‌ಐ ಗುರುರಾಜ್ ಮೈಲಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಟಲಿ ಹಾಲು ತಪ್ಪಿಸಿ: ರತ್ನಕುಮಾರಿ
ಕುರುಗೋಡು: ಪಟ್ಟಣ ಸಮೀಪದ ಸಿರಿಗೇರಿ ಗ್ರಾಮದ ಹರಿಜನ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ದಿನ ಹಾಗೂ ಸರ್ಕಾರಿ ಯೋಜಿತ ಹಾಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಆರೋಗ್ಯ ಸಹಾಯಕಿ ರತ್ನಕುಮಾರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಾಯಿಯ ಎದೆ ಹಾಲಿನ ಮಹತ್ವ ಅರಿಯದ ಕೆಲವರು ಬಾಟಲಿ ಹಾಲಿನ ಮೊರೆ ಹೋಗುತ್ತಿರುವ ಪರಿಣಾಮ ಅದೆಷ್ಟೋ ಮಕ್ಕಳು ಅಂಗವಿಕಲತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಯಂದಿರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸೂಕ್ತ ಸಲಹೆ ಪಡೆಯಬೇಕೆಂದು ಮನವಿ ಮಾಡಿದರು.  ಅಂಗನವಾಡಿ ಕಾರ್ಯಕರ್ತೆಯರಾದ ಸಂಗಮ್ಮ, ಯರೆಮ್ಮ, ಸುವರ್ಣಾ, ಗ್ರಾಪಂ ಸದಸ್ಯ ಭೀಮಣ್ಣ, ಆರೋಗ್ಯ ಸಹಾಯಕ ಸತೀಶ್ ಇದ್ದರು.

ಸಮಯ ಸದುಪಯೋಗವಾಡಿಕೊಳ್ಳಿ: ನಾಗೇಶ
ಬಳ್ಳಾರಿ: ಜೀವನದಲ್ಲಿ ಸಮಯದ ಒಂದೊಂದು ಕ್ಷಣವೂ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಲ್ಲಿ ಯಶಸ್ಸು ಪಡೆಯಬಹುದು ಎಂದು ಮಣಿಪಾಲ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ನಾಗೇಶ್ ಕುಮಾರ್ ತಿಳಿಸಿದರು. ಬಳ್ಳಾರಿಯ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂಪ್ಯೂಟರ್ ಟ್ಯಾಲಿ ಎನ್ನುವುದು ವ್ಯಾವಹಾರಿಕ ಕ್ಷೇತ್ರದಲ್ಲಿರುವ ಎಲ್ಲ ತರಹದ ಸಮಸ್ಯೆಗಳನ್ನು ಪರಿಹರಿಸುವಂತಹದ್ದು, ಶಿಬಿರಾರ್ಥಿಗಳು ತಮ್ಮಲ್ಲಿನ ಕೌಶಲ್ಯವನ್ನು ಉತ್ತಮವಾಗಿ ಬಳಸಿಕೊಂಡು ಸ್ವ-ಉದ್ಯೋಗ ಕಲ್ಪಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಬಳ್ಳಾರಿಯ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಎಫ್.ಬಿ. ಬಾಳಿಕಾಯಿ ಮಾತನಾಡಿ, ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು, ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು. ಉಪನ್ಯಾಸಕ ಎಚ್.ಪಿ. ಕಲ್ಲೇಶ್ ಮಾತನಾಡಿದರು. ನಂತರ ಶಿಬಿರಾರ್ಥಿಗಳಾದ ಶಿವಕುಮಾರ್, ಹರ್ಷಿತಾ, ಕುಸುಮ ಹಾಗೂ ಇತರರು ತರಬೇತಿ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಕೌಶಲ್ಯ ತರಬೇತಿಗಾರ್ತಿ ನಾಗರತ್ನಾ ಸೇರಿದಂತೆ ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಉಷಾರಾಣಿ ಸ್ವಾಗತಿಸಿದರು. ಜಿ. ರವಿ ನಿರೂಪಿಸಿದರು. ಚಿತ್ರಶಾಲಿನಿ ವಂದಿಸಿದರು. ನಂತರ ಶಿಬಿರಾರ್ಥಿಗಳು ಬಳ್ಳಾರಿ ನಗರದಲ್ಲಿರುವ ಕೆಲ ಕಂಪ್ಯೂಟರ್ ಟ್ಯಾಲಿ ಕೇಂದ್ರಗಳಿಗೆ ಭೇಟಿ ನೀಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ಕಂಪ್ಯೂಟರ್ ಟ್ಯಾಲಿಯ ಅಗತ್ಯತೆ, ಟ್ಯಾಲಿ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅನುಭವ ಪಡೆದುಕೊಂಡರು.

ಹೊಸಕೆರೆ: ವೀರಭದ್ರೇಶ್ವರ ರುದ್ರಾಭಿಷೇಕ
ಹಗರಿಬೊಮ್ಮನಹಳ್ಳಿ: ಶ್ರಾವಣ ಮಾಸದ ಆಂಗವಾಗಿ ತಾಲೂಕಿನ ಹೊಸಕೆರೆ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರುದ್ರಾಭಿಷೇಕದ ಮಹಾಪೂಜೆ ಸೆಪ್ಟೆಂಬರ್ 6ರ ವರೆಗೆ ಪ್ರತಿದಿನ ಮುಂಜಾನೆ 6ರಿಂದ 9ರ ವರೆಗೆ ಜರುಗಲಿದೆ ಎಂದು ದೈವಸ್ಥರು ತಿಳಿಸಿದ್ದಾರೆ. ಎಚ್.ಎಂ. ಗಂಗಾಧರಯ್ಯ ಇವರಲ್ಲಿ ರು. 151 ನೀಡಿ ರಸೀದಿ ಪಡೆದು ರುದ್ರಾಭಿಷೇಕ ಬಿಲ್ವಾರ್ಚಾನೆ ಪೂಜೆ ಸಲ್ಲಿಸಬಹುದು. ದೇವಸ್ಥಾನಕ್ಕೆ ಬರಲು ಅನಾನುಕೂಲವಾದರೆ ಎಚ್.ಎಂ. ಗಂಗಾಧರಯ್ಯ ಇವರ ಹೆಸರಲ್ಲಿನ ಎಂಓ ಮಾಡಿದರೆ ರಸೀದಿ ಜತೆಗೆ ಪ್ರಸಾದವನ್ನು ಭಕ್ತರಿಗೆ ಕಳುಹಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement