ದ್ವಾದಶ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಆ. 9
ಹೊಸಪೇಟೆ ತಾಲೂಕು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಟ್ಟೆ ಉಮಾಪತಿ ಅವರು ದಿವಂಗತ ಕಟ್ಟೆ ನೀಲಪ್ಪ ಮತ್ತು ಕಟ್ಟೆ ನೀಲಮ್ಮ ಅವರ ಸರಣ್ಮಾರ್ಥ ಕಂಪ್ಲಿ ಸಮೀಪದ ನಂ. 10 ಮುದ್ದಾಪುರದಲ್ಲಿ ಶಿವದೇವಾಲಯ ಉದ್ಘಾಟನೆ, ದ್ವಾದಶ ಜ್ಯೋತಿರ್ಲಿಂಗಗಳ ಪ್ರಾಣ ಪ್ರತಿಷ್ಠಾಪನೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆ. 12ರಂದು ಸೋಮವಾರ ಹಮ್ಮಿಕೊಂಡಿದ್ದಾರೆ.
ಆ. 10ರಂದು ಶನಿವಾರ ಬೆಳಗ್ಗೆ 10.40ರಿಂದ ಇಷ್ಟಲಿಂಗ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಭವ್ಯ ಮೆರವಣಿಗೆ ಗ್ರಾಮದಲ್ಲಿ ನಡೆಯಲಿದೆ. ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತಮಠದ ವಾಮದೇವ ಮಹಾಂತ ಶಿವಾಚಾರ್ಯರು, ಹಾವೇರಿ ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಸ್ವಾಮಿಗಳು, ಹರಗಿನಡೋಣಿ ಸಿದ್ಧಲಿಂಗ ಶಿವಾಚಾರ್ಯರು, ಹೆಬ್ಬಾಳು ಬೋಳೋಡಿ ಬಸವೇಶ್ವರ ಸಂಸ್ಥಾನ ಬೃಹನ್ಮಠದ ನಾಗಭೂಷಣಶ್ರೀಗಳು, ಬಳ್ಳಾರಿ- ನಿಟ್ಟೂರು ವೇದವ್ಯಾಸ ಪೀಠದ ಸಹಜಾನಂದ ಸರಸ್ವತಿ, ಕಂಪ್ಲಿ ಸಾಂಗತ್ರಯ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗಳು ಮತ್ತು ಕಂಪ್ಲಿ ಚೌಕಿ ಮಠದ ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಬಸವರಾಜಶಾಸ್ತ್ರಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 11.30ರಿಂದ ಗ್ರಾಮದ ವೀರಶೈವ ಸಮಾಜ ಬಾಂಧವರಿಂದ ನೂತನ ಶಿಲಾಮೂರ್ತಿಗಳಿಗೆ ಆಗಮೋಕ್ತ ವಿಧಿಯಿಂದ ಜಲಾದಿವಾಸ, ರಾತ್ರಿ 7 ಗಂಟೆಗೆ ಕಂಪ್ಲಿ ಶಾರದಾ ನೃತ್ಯ ನಿಕೇತನ ಶಾಲೆಯ ಕಟ್ಟೆ ವರ್ಷಿಣಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯುವುದು.
ಆ. 11ರ ಭಾನುವಾರ ಬೆಳಗ್ಗೆ 6.30ಕ್ಕೆ ಶಿಲಾಮೂರ್ತಿಗಳ ಧಾನ್ಯಾದಿವಾಸ ಕಾರ್ಯಕ್ರಮ, 9ಕ್ಕೆ ಮಂಡಲ ಪೂಜಾ, ವಾಸ್ತು ಪೂಜಾ, ಮಹಾ ಮೃತ್ಯುಂಜಯ ಪೂಜಾ, ನವಗ್ರಹ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಆ. 12ರ ಸೋಮವಾರ ಬೆಳಗಿನಜಾವ 4ಕ್ಕೆ ನೂತನ ಶಿಲಾಮೂರ್ತಿಗಳ ಪೀಠಗಳಿಗೆ ಯಂತ್ರ ಪ್ರತಿಷ್ಠಾಪನೆ, ಬೆಳಗಿನ ಜಾವ 5ಕ್ಕೆ ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯರು ಶಿಲಾಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾನ, ಪೂರ್ಣಾಹುತಿ, ಮಹಾ ಮಂಗಳಾರತಿ, ಬೆಳಗ್ಗೆ 10ಕ್ಕೆ ಸಾಮೂಹಿಕ ವಿವಾಹ, ಮಧ್ಯಾಹ್ನ 12ಕ್ಕೆ ಗಿರಿಜಾ ಕಲ್ಯಾಣ ನೆರವೇರುವುದು.
ಆ. 12ರಂದು ಬೆಳಗ್ಗೆ 9ಕ್ಕೆ ಉಜ್ಜಿನಿ ಸದ್ಧರ್ಮ ಸಿಂಹಾಸನಾದೀಶ್ವರ 1008 ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 12.30ರಿಂದ ನಡೆಯುವ ಧರ್ಮ ಸಭೆಯಲ್ಲಿ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಸೇರಿದಂತೆ ಹಿರಿಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು.