ರಸ್ತೆ ಅಭಿವೃದ್ಧಿಕಾಮಗಾರಿ ಆರಂಭ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 10
ಅನುದಾನದ ಕೊರತೆಯಿಂದ ನಿಲುಗಡೆಗೊಂಡಿದ್ದ ಪಟ್ಟಣದ ಕೂಡ್ಲಿಗಿ-ಹರಪ್ಪನಹಳ್ಳಿರಸ್ತೆಯ ಅಭಿವೃದ್ಧಿ ಕಾಮಗಾರಿಗಳು ಆ. 12ರಿಂದ ಪುನರ್ ಪ್ರಾರಂಭಗೊಳ್ಳಲಿವೆ.
ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳುವವರೆಗೂ ಮುಂದುವರೆಯಲಿದೆ ಎಂದು ಕಾಮಗಾರಿ ನಿರ್ವಹಣೆಯ ಉಸ್ತುವಾರಿ ಅಧಿಕಾರಿ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಕೆ. ನಾಗನಗೌಡ ತಿಳಿಸಿದರು.
ಶನಿವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ 4 ಕೋಟಿ ಬಿಡುಗಡೆಗೊಳಿಸಿದೆ. ಅನುದಾನ ಬಿಡುಗಡೆ ವಿಳಂಬವಾದ್ದರಿಂದ ಕಾಮಗಾರಿ ನಿರ್ವಹಣೆ ಹೊತ್ತವರು ಸ್ಥಗಿತಗೊಳಿಸಿದ್ದರು. ಸಂಪೂರ್ಣ ಕಾಮಗಾರಿ ಕಾಲಾವಧಿ ಆ. 21ಕ್ಕೆ ನಿಗದಿಗೊಂಡಿದೆ. ಇದಕ್ಕನುಗುಣವಾಗಿ ಇನ್ನು ಮುಂದೆ ಕಾಮಗಾರಿ ತಡೆಯಿಲ್ಲದೇ ನಡೆಯಲಿದೆ ಎಂದರು.
ಕಾಮಗಾರಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಕೊಟ್ಟೂರಿನ ಈ ಪ್ರಮುಖ ರಸ್ತೆ ಶೀಘ್ರದಲ್ಲೇ ಅತ್ಯುತ್ತಮ ರಸ್ತೆಯಾಗಿ ಕಂಗೊಳಿಸುವುದು ನಿಶ್ಚಿತ. ಈ ನಿಟ್ಟಿನಲ್ಲಿ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ ಎಂದರು.