ತುಂಗಭದ್ರಾ ಜಲಾಶಯದಿಂದ ನೀರು: ತಗ್ಗು ಪ್ರದೇಶದಲ್ಲಿ ಕೊಳೆತ ಬೆಳೆ
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಸತತ 2 ವಾರಗಳಿಗೂ ಅಧಿಕ ಕಾಲ ನದಿಗೆ ಹೆಚ್ಚಿನ ನೀರು ಬಿಟ್ಟಿರುವ ಪರಿಣಾಮ ತುಂಗಭದ್ರಾ ನದಿ ಪಾತ್ರದ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ, ಬತ್ತ, ಬಾಳೆ, ಕಬ್ಬು ಬೆಳೆಗಳಿಗೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಟಿ.ಬಿ. ಡ್ಯಾಂನಿಂದ ಜುಲೈ 23ರಿಂದ ನದಿಗೆ ನೀರು ಹರಿಬಿಡಲಾಗಿತ್ತು. ಆ. 7ರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಸತತ 2 ವಾರಕ್ಕೂ ಹೆಚ್ಚು ಕಾಲ ತುಂಬಿ ಹರಿದ ತುಂಗಭದ್ರಾ ನದಿ ನೀರಿನ ಪ್ರಮಾಣ ಇದೀಗ ಇಳಿಮುಖವಾಗಿದೆ. ಆದರೆ ನದಿ ಪಾತ್ರದ ಕಂಪ್ಲಿ, ಕೋಟೆ, ಬೆಳಗೋಡುಹಾಳ್, ಸಣಾಪುರ, ಇಟಿಗಿ, ರಾಮಸಾಗರ ಗ್ರಾಮಗಳ ಜಮೀನುಗಳಲ್ಲಿ 2 ವಾರಕ್ಕೂ ಹೆಚ್ಚು ಕಾಲ ನದಿ ನೀರು ಹರಿದ ಪರಿಣಾಮ ನೂರಾರು ಎಕರೆ ಪ್ರದೇಶದ ಬಾಳೆ, ಕಬ್ಬು ಹಾಗೂ ಬತ್ತದ ಬೆಳೆಗೆ ತೇವಾಂಶ ಹೆಚ್ಚಾಗಿ ಹಾನಿಯಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಸುಗ್ಗಿ ಹಂಗಾಮಿನಲ್ಲಿ ನಾಟಿ ಮಾಡಿದ ಬತ್ತ ಜಲಾವೃತದಿಂದ ಹಾನಿಯಾಗಿದ್ದು, ಲಕ್ಷಾಂತರ ರುಪಾಯಿಗಳಷ್ಟು ಹಾನಿಯಾಗಿದೆ. ಕಬ್ಬು, ಬಾಳೆ ಬೆಳೆಗೆ ನೀರು ನುಗ್ಗಿದ ಪರಿಣಾಮ, ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಇಳುವರಿ ಕಡಿಮೆಯಾಗಲಿದೆ. ನೀರು ನುಗ್ಗಿ ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಬೆಳೆ ಹಾಳಾಗಿದ್ದು, ಸರ್ಕಾರ ಕೂಡಲೆ ಸಮೀಕ್ಷೆ ಮಾಡಿ ಪರಿಹಾರ ಧನ ವಿತರಿಸಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.