ಪುನರ್ವಸತಿ ಕಾರ್ಯ ಆಮೆಗತಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 12
ಉತ್ತರ ಕರ್ನಾಟಕದ ರೈತರ ಜೀವನಾಡಿ ಸಿಂಗಟಾಲೂರು ಏತನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಮುಳುಗಡೆಯಾಗುತ್ತಿರುವ ತಾಲೂಕಿನ ಅಲ್ಲಿಪುರ, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ ಮತ್ತು ವಿಠಲಾಪುರ ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಯೋಜನೆ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ 4 ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸರ್ಕಾರ ರು. 109.91 ಕೋಟಿಯ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು.
ಈಗಾಗಲೇ ಬಲದಂಡೆ ಭಾಗದ ಅಲ್ಲಿಪುರಕ್ಕೆ ರು. 6 ಕೋಟಿ, ಎಡದಂಡೆ ಭಾಗದ ಗುಮ್ಮಗೋಳಕ್ಕೆ ರು. 7 ಕೋಟಿ, ಬಿದರಹಳ್ಳಿಗೆ ರು. 22 ಕೋಟಿ ಪರಿಹಾರ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿ ವಿತರಣೆ ಮಾಡಿದೆ.
ಉಳಿದಂತೆ ಕಾಲುವೆ ಕಾಮಗಾರಿಗೆ ಭೂಮಿ ಕಳೆದುಕೊಂಡ ನಾಗತಿ ಬಸಾಪುರ, ದೇವಗೊಂಡನಹಳ್ಳಿ, ಹುಗಲೂರು ಗ್ರಾಮಗಳ ರೈತರಿಗೆ ರು. 1 ಕೋಟಿ ಹಾಗೂ ಯೋಜನೆ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ ಶಿರಹಟ್ಟಿ ತಾಲೂಕಿನ ಕಲ್ಲನೂರು ಗ್ರಾಮದ ರೈತರಿಗೆ ರು. 37 ಲಕ್ಷ, ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ರೈತರಿಗೆ ರು. 9 ಲಕ್ಷ ಸೇರಿದಂತೆ ಒಟ್ಟು ರು. 36.46 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಉಳಿದಂತೆ ಇನ್ನು ರು. 3 ಕೋಟಿ ಪರಿಹಾರ ಬಾಕಿ ಇದೆ ಎನ್ನುತ್ತಾರೆ ವಿಶೇಷ ಭೂಸ್ವಾಧಿನಾಧಿಕಾರಿಗಳು.
ಕ್ರಿಯಾಯೋಜನೆ ರು. 462.94 ಲಕ್ಷ
ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತಿರುವ 4 ಗ್ರಾಮಗಳ ಸಂತ್ರಸ್ತರ ಸ್ಥಳಾಂತರಕ್ಕೆ ಈಗಾಗಲೇ ಭೂಮಿ ಖರೀದಿ ಮಾಡಿ, ರೈತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸ್ಥಳದಲ್ಲಿ ಚರಂಡಿ, ರಸ್ತೆ, ನಿವೇಶನ ಗುರುತು, ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕಾಗಿ ರು. 4.51 ಕೋಟಿ ಕ್ರಿಯಾಯೋಜನೆ ಮಂಜೂರಾತಿಯಾಗಿದ್ದರೂ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ನಡೆಯುತ್ತಿದೆ.
ಇದರಲ್ಲಿ ತಾಲೂಕಿನ ಅಲ್ಲಿಪುರ ಸ್ಥಳಾಂತರ ಗ್ರಾಮದಲ್ಲಿ ರು. 134 ಲಕ್ಷಗಳಲ್ಲಿ ರು. 55 ಲಕ್ಷ ಬಳಕೆಯಾಗಿದೆ. ಮುಂಡರಗಿ ತಾಲೂಕಿನ ಬಿದರಹಳ್ಳಿಗೆ ರು. 196.6 ಲಕ್ಷಗಳಲ್ಲಿ ರು. 128 ಲಕ್ಷ ವೆಚ್ಚವಾಗಿದೆ, ಗುಮ್ಮಗೋಳ ಗ್ರಾಮಕ್ಕೆ ರು. 120 ಲಕ್ಷಗಳಲ್ಲಿ ರು. 60 ಲಕ್ಷ ಬಳಕೆಯಾಗಿದ್ದು, ಉಳಿದಂತೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿಗಾಗಿ 4 ಗ್ರಾಮಗಳ ನಡುವೆ ಒಟ್ಟು ರು. 462.94 ಲಕ್ಷ ಕ್ರಿಯಾಯೋಜನೆ ಮಂಜೂರಾತಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಾಮಗಾರಿಗೆ ಹಿನ್ನಡೆ: ತಾಲೂಕಿನ ಅಲ್ಲಿಪುರ ಸ್ಥಳಾಂತರ ಗ್ರಾಮದಲ್ಲಿ ರು. 55 ಲಕ್ಷ ವೆಚ್ಚ ಮಾಡಲಾಗಿದ್ದು, ಸ್ಥಳಾಂತರಕ್ಕಾಗಿ 54 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದ. ಇದರಲ್ಲಿ 10 ಎಕರೆ ಜಮೀನು ಹೊಂದಿರುವ ತಾಲೂಕಿನ ಮಾಗಳ ಗ್ರಾಮದ ರೈತರೊಬ್ಬರು ಧಾರವಾಡದ ಹೈಕೋರ್ಟ್ ಸಂಚಾರಿ ಪೀಠದಿಂದ ತಡೆಯಾಜ್ಞೆ ತಂದಿರುವುದರಿಂದ ಕಾಮಗಾರಿ ಪೂರ್ಣಗೊಳಿಸುವಲ್ಲಿ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.
44 ಎಕರೆ ರೈತರಿಗೆ ಪರಿಹಾರ ವಿತರಣೆಯಾಗಿದೆ, ಕುಡಿಯುವ ನೀರಿಗಾಗಿ ರು. 90.10 ಲಕ್ಷ, ವಿದ್ಯುತ್ ಸಂಪರ್ಕಕ್ಕಾಗಿ ರು. 40.62 ಲಕ್ಷ ಯೋಜನೆ ಕಾಮಗಾರಿ ಇನ್ನು ಆರಂಭವಾಗಿಲ್ಲ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗುಮ್ಮಗೋಳ ಸ್ಥಳಾಂತರಕ್ಕಾಗಿ 35 ಎಕರೆ ಭೂಸ್ವಾಧೀನ ಮಾಡಿಕೊಂಡು ಪರಿಹಾರ ವಿತರಣೆಯಾಗಿದೆ, ವಿದ್ಯುತ್ ಸಂಪರ್ಕಕ್ಕೆ ರು. 35.69 ಲಕ್ಷ, ಕುಡಿಯುವ ನೀರಿಗಾಗಿ ರು. 110.20 ಲಕ್ಷ ಯೋಜನೆ ಸಿದ್ಧವಾಗಿದೆ. ಬಿದರಹಳ್ಳಿ ಸ್ಥಳಾಂತರಕ್ಕಾಗಿ 85 ಎಕರೆ ಭೂಸ್ವಾಧೀನ ಮಾಡಿಕೊಂಡು ಪರಿಹಾರ ವಿತರಣೆಯಾಗಿದೆ, ಕುಡಿಯುವ ನೀರಿಗಾಗಿ ರು. 108.4 ಲಕ್ಷ, ವಿದ್ಯುತ್ ಸಂಪರ್ಕಕ್ಕಾಗಿ ರು. 78.91 ಟೆಂಡರ್ ಹಂತದಲ್ಲಿದೆ.
ಅಲ್ಲಿಪುರ ಸ್ಥಳಾಂತರ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಇನ್ನು ಪೂರ್ಣಗೊಂಡಿಲ್ಲ. ಕಳೆದ 3 ತಿಂಗಳಿಂದ ಕಾಮಗಾರಿ ಪೂರ್ಣ ನಿಂತಿದೆ. ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇಲ್ಲಿ ಮರೀಚಿಕೆ.
ಸಿಂಟಾಲೂರು ಬ್ಯಾರೇಜ್ನಲ್ಲಿ ನೀರು ನಿಲ್ಲಿಸುತ್ತಿರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭಯವಿದ್ದು, ನೀರೆಲ್ಲ ಪೂರ್ಣ ದುರ್ವಾಸನೆ ಬೀರುತ್ತಿದೆ. ನೀರಿನಲ್ಲಿನ ವಿಷಜಂತುಗಳು ನಿತ್ಯ ಮನೆಯೊಳಗೆ ಬರತೊಡಗಿವೆ. ವಿಷಜಂತುಗಳ ಕಡಿದಿರುವ ಉದಾಹರಣೆ ಸಾಕಷ್ಟಿವೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಬೇಗ ಸ್ಥಳಾಂತರ ಗ್ರಾಮದಲ್ಲಿ ಅಗತ್ಯ ಸೌಲಭ್ಯ ನೀಡಿ, ಬದುಕಲು ದಾರಿ ಮಾಡಿಕೊಡಬೇಕು ಎನ್ನುತ್ತಾರೆ ಅಲ್ಲಿಪುರ ಸಂತ್ರಸ್ತರು.
-ಚಂದ್ರು ಕೊಂಚಿಗೇರಿ