ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕುತೂಹಲ ಮೂಡಿಸಿದ ಕುಲಸಚಿವರ ಆಗಮನ

Lingaraj Badiger
Updated On : 14 Aug 2013, 11:50 am

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆಯಲಿರುವ ಘಟನೆಯು ಕುತೂಹಲ ಹಾಗೂ ಗೊಂದಲದಿಂದ ಕೂಡಿದೆ.
ವಿವಿಯ ಕುಲಸಚಿವ ವಿಜಯಕುಮಾರ್ ಅವರನ್ನು ಕುಲಸಚಿವರನ್ನಾಗಿ ಉನ್ನತ ಶಿಕ್ಷಣ ಇಲಾಖೆ ಮುಂದುವರೆಸಿ ಆದೇಶ ನೀಡಿದ್ದರಿಂದ ಪ್ರತಿಯೊಂದಿಗೆ ವಿವಿಗೆ ಕುಲಸಚಿವರಾಗಿ ಮುಂದುವರಿಯಲು ವಿಜಯಕುಮಾರ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಿ ಕುಲಪತಿಗಳು ಅವರ ಆದೇಶ ಪ್ರತಿಯನ್ನು ಅಂಗೀಕರಿಸುತ್ತಾರೋ ಅಥವಾ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಸರ್ಕಾರದಿಂದ ವಿಶ್ವವಿದ್ಯಾಲಯಕ್ಕೆ ನೇಮಕವಾಗಿರುವ ಕುಲಸಚಿವರ ಡಾ. ವಿಜಯಕುಮಾರ್ ಅವರನ್ನು ಇತ್ತೀಚಿಗೆ ವಿವಿ ಸಿಂಡಿಕೇಟ್ ಸಭೆ ಅವರನ್ನು ವಿವಿಯ ಕುಲಸಚಿವ ಸ್ಥಾನದ ಸೇವೆಯಿಂದ ತೆರವುಗೊಳಿಸಿ, ಮಾತೃ ವಿಶ್ವವಿದ್ಯಾಲಯದಲ್ಲಿ ಹಾಜರಾಗುವಂತೆ ತಿಳಿಸಿತ್ತು. ಅದರ ಬೆನ್ನಲ್ಲೆ ಇದೀಗ ವಿಜಯಕುಮಾರ್ ಅವರು ಉನ್ನತ ಶಿಕ್ಷಣ ಇಲಾಖೆಯಿಂದ ಕುಲಸಚಿವರಾಗಿ ಮುಂದುವರಿಕೆಗೆ ಆದೇಶವನ್ನು ತಂದಿದ್ದು, ಬುಧವಾರ ಆದೇಶದ ಪ್ರತಿಯೊದಿಗೆ ಅವರು ವಿವಿಗೆ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ.
ಕುತೂಹಲ: ಡಾ. ವಿಜಯಕುಮಾರ್ ಅವರ ಬೆಂಬಲಕ್ಕೆ ಕೆಲ ಸಂಘಟನೆಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿವೆ. ಒಂದುವೇಳೆ ಸರ್ಕಾರದ ಆದೇಶವನ್ನು ಕುಲಪತಿಗಳು ನಿರಾಕರಿಸಿದರೆ, ಪರಿಸ್ಥಿತಿ ಗೊಂದಲವಾಗುವ ಲಕ್ಷಣಗಳು ಹೆಚ್ಚಿವೆ. ಇನ್ನು ವಿಶ್ವವಿದ್ಯಾಲಯದ ಕುಲಪತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕುಲಪತಿಗಳ ಮತ್ತು ಕುಲಸಚಿವರ ಮಧ್ಯೆ ನಡೆಯುತ್ತಿರುವ ಸಮರಕ್ಕೆ ತೆರೆ ಬೀಳುತ್ತದೆಯೋ ಅಥವಾ ಗೊಂದಲ ಹೀಗೆ ಮುಂದುವರೆಯುತ್ತದೆಯೋ ಎಂಬುದನ್ನು ಜನತೆ ಕಾದು ನೋಡುತ್ತಿದ್ದಾರೆ.
ವಿವಿಯಲ್ಲಿ ಸಭೆ: ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ವಿವಿ ಕುಲಪತಿ ಮಂಜಪ್ಪ ಹೊಸಮನಿ ಅವರು ಮಂಗಳವಾರ ವಿವಿಯ ಬೋಧಕ, ಬೋಧಕೇತರ ಸಿಬ್ಬಂದಿ ಸಭೆ ಕರೆದು, ಸುಮಾರು ಮುಕ್ಕಾಲು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಕುಲಪತಿ ಮತ್ತು ಕುಲಸಚಿವರ ಮಧ್ಯೆ ನಡೆಯುತ್ತಿರುವ ಆಂತರಿಕ ಕಚ್ಚಾಟದ ಕುರಿತು ಚರ್ಚೆ ನಡೆದಿದೆ. ಇಂತಹ ಗೊಂದಲಗಳ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement