ವಿದ್ಯಾರ್ಥಿಗಳು ಕಾಣೆ: ದೂರು ದಾಖಲು
ಬಳ್ಳಾರಿ: ನಗರದ ಕೌಲ್ಬಜಾರ್ನ ವಿವಿಧ ಪ್ರದೇಶಗಳಿಂದ ಮೂವರು ಕಾಣೆಯಾಗಿರುವ ಬಗ್ಗೆ ಇಲ್ಲಿನ ಕೌಲ್ಬಜಾರ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ನಗರದ ಕೋಟೆ ಪ್ರದೇಶದಲ್ಲಿರುವ ಸೆಂಟ್ಜಾನ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೋವರ್ಧನ (14) ಜು. 7ರಿಂದ ಕಾಣೆಯಾಗಿದ್ದಾನೆ. ಬೆಳಗ್ಗೆ 8.30ಕ್ಕೆ ಶಾಲೆಗೆ ಹೋದ ಈತನು, ತನ್ನ ಬ್ಯಾಗ್ ಮತ್ತು ಸೈಕಲ್ನ್ನು ಶಾಲೆಯಲ್ಲಿ ಇಟ್ಟು ಹೊರಗೆ ಹೋದವನು ಮರಳಿ ಬಂದಿಲ್ಲ. ಕನ್ನಡ, ತೆಲುಗು ಭಾಷೆ ಬಲ್ಲವನಾಗಿದ್ದಾನೆ ಎಂದು ಈತನ ತಂದೆ ವಿಜಯ್ ಭಾಸ್ಕರ್ರೆಡ್ಡಿ ಠಾಣೆಗೆ ದೂರು ನೀಡಿದ್ದಾರೆ. ನಗರದ ಸಿರುಗುಪ್ಪ ರಸ್ತೆಯ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಜ್ಯೋತಿ (11) ಎಂಬ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಬಾಲ ಮಂದಿರದ ಅಧೀಕ್ಷಕಿ ಕೃಷ್ಣಮ್ಮ ಠಾಣೆಗೆ ದೂರು ನೀಡಿದ್ದಾರೆ. ಈಕೆಯು ಜು. 30ರಂದು ಸಂಜೆ 5ಕ್ಕೆ ಶೌಚಾಲಯದ ಕಿಟಕಿಯಿಂದ ಹೊರ ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಗರದ ಪೋಲಾ ಹೊಟೇಲ್ನಲ್ಲಿ ವೇಟರ್ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ (22) ಎಂಬ ಯುವಕ ಜೂ. 14ರ ರಾತ್ರಿಯಿಂದ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಈ ಮೂವರ ಕುರಿತು ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೌಲ್ಬಜಾರ್ ಠಾಣೆ ಪಿಎಸ್ಐ ಕೋರಿದ್ದಾರೆ.