ಪರಮೇಶ್ವರ ನಾಯ್ಕ ಧ್ವಜಾರೋಹಣ
ಬಳ್ಳಾರಿ: ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಆಗಸ್ಟ್ 15ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 9.05ಕ್ಕೆ ಗೌರವ ಸ್ವೀಕಾರ ಹಾಗೂ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆಗೆ ವಿಮ್ಸ್ನಲ್ಲಿ ರೋಗಿಗಳಿಗೆ ಹಣ್ಣುಗಳನ್ನು ಸಚಿವರು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಮಂಗಳ ಗುಬಾಜಿ, ಸಂಸದೆ ಜೆ. ಶಾಂತ, ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮೇಗೌಡ, ಶಾಸಕ ಬಿ. ಶ್ರೀರಾಮುಲು, ಅನಿಲ್ ಎಚ್. ಲಾಡ್, ಆನಂದ್ ಸಿಂಗ್, ಟಿ.ಎಚ್. ಸುರೇಶ್ಬಾಬು, ಇ. ತುಕಾರಾಮ್, ಬಿ. ನಾಗೇಂದ್ರ, ಭೀಮಾನಾಯ್ಕ ಎಲ್.ಬಿ.ಪಿ, ಬಿ.ಎಂ. ನಾಗರಾಜ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಅಮರನಾಥ್ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯಕ್ ಪಾಲ್ಗೊಳ್ಳಲಿದ್ದಾರೆ. ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ವಾತಂತ್ರ್ಯ ದಿನ: ಇಂದು ಕಾರ್ಯಕ್ರಮ
ಹೊಸಪೇಟೆ: 67ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆ. 15ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ. ಸಹಾಯಕ ಆಯುಕ್ತ ಡಾ.ಡಿ.ಆರ್. ಅಶೋಕ್ ಧ್ವಜಾರೋಹಣ ನೆರವೇರಿಸುವರು. ಶಾಸಕ ಬಿ.ಎಸ್. ಆನಂದ್ ಸಿಂಗ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಸಂಸದೆ ಜೆ. ಶಾಂತಾ, ಶಾಸಕರಾದ ಟಿ.ಎಚ್. ಸುರೇಶ್ಬಾಬು, ಎಸ್. ಭೀಮಾನಾಯ್ಕ, ವಿಧಾನಪರಿಷತ್ ಸದಸ್ಯರಾದ ಮೃತ್ಯುಂಜಯ ಜಿನಗಾ, ಶಶೀಲ್ ನಮೋಶಿ, ಅಮರನಾಥ ಪಾಟೀಲ್, ಜಿಲ್ಲಾ ನ್ಯಾಯಾಧೀಶ ಶಿವಣ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಾರುತಿ ಬಾಗಡೆ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ನಾರಾಯಣಪ್ರಸಾದ್, ಪ್ರಧಾನ ಸಿವಿಲ್ ನ್ಯಾಯಾಧೀಶ ಹತ್ತಿಕಾಳ ಪ್ರಭು ಸಿದ್ದಪ್ಪ, ಅಪರ ಸಿವಿಲ್ ನ್ಯಾಯಾಧೀಶ ಎ. ಈರಣ್ಣ, ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ, ಎಪಿಎಂಸಿ ಅಧ್ಯಕ್ಷ ಎನ್. ಪುರುಷೋತ್ತಮ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎ. ಹೇಮಣ್ಣ, ಡಿವೈಎಸ್ಪಿ ರಶ್ಮಿ ಪರಡ್ಡಿ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ತಾಪಂ ಇಒ ಬಾಲಸ್ವಾಮಿ ದೇಶಪ್ಪ, ಬಿಇಒ ಪಿ. ಸುನಂದಾ ಭಾಗವಹಿಸುವರು. ಧ್ವಜಾರೋಹಣದ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ, ಹೋಂ ಗಾರ್ಡ್, ಎನ್ಸಿಸಿ, ಸ್ಕೌಟ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಧ್ವಜ ವಂದನೆ, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕವಾಯತು ಹಾಗೂ ದೇಶ ಭಕ್ತಿಗೀತೆಗಳ ಗಾಯನ ನಡೆಯಲಿದೆ.
ಸಿಹಿಯೊಂದಿಗೆ ಸ್ವಾತಂತ್ರ್ಯೋತ್ಸವ
ಹಗರಿಬೊಮ್ಮನಹಳ್ಳಿ: 67ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗುವ ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿ ಸಿಬ್ಬಂದಿಗೆ ಗುರುವಾರ ರುಚಿಯಾದ ಮೈಸೂರ್ ಪಾಕ್ ಜೊತೆಗೆ ಸಿಹಿ ತಿಂದ ಮೇಲೆ ಬಾಯಿ ಖಾರ ಮಾಡಿಕೊಳ್ಳಲು ಡಾಣಿ(ಖಾರ) ಸಾಥ್ ನೀಡಲಿದೆ. ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಸಿಹಿಯೊಂದಿಗೆ ಆಚರಿಸಬೇಕೆಂಬ ಹಂಬಲದೊಂದಿಗೆ ಸ್ಥಳಿಯ ಶಾಸಕ ಎಸ್. ಭೀಮಾನಾಯ್ಕ ಸ್ವಂತ ಖರ್ಚಿನಲ್ಲಿ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರ ಹಾಗೂ ಪಕ್ಕದ ಹೂವಿನಹಡಗಲಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲ ಶಾಲಾ-ಕಾಲೇಜು,ಸರ್ಕಾರಿ ಕಚೇರಿ ಸಿಬ್ಬಂದಿಗೆ ಮೈಸೂರುಪಾಕ್, ಖಾರದ ವ್ಯವಸ್ಥೆ ಮಾಡಿದ್ದಾರೆ.
ನಾಳೆ 108 ಜೋಡಿ ಸಾಮೂಹಿಕ ವಿವಾಹ
ಬಳ್ಳಾರಿ: ಬಳ್ಳಾರಿಯ ಗ್ರಾಮೀಣ ಶಾಸಕ ಬಿ. ಶ್ರೀರಾಮುಲು ಅವರು ಹಮ್ಮಿಕೊಂಡಿರುವ 108 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆ. 16ರಂದು ಮಧ್ಯಾಹ್ನ 12 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಜರುಗಲಿದೆ. ಬಿ. ಶ್ರೀರಾಮುಲು ಅವರ ಅಭಿಮಾನಿಗಳ ಬಳಗ ಹಾಗೂ ಬಿಎಸ್ಆರ್ ಕಾಂಗ್ರೆಸ್ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ, ಬಳ್ಳಾರಿ ಸಂಸದೆ ಜೆ ಶಾಂತಾ, ಶಾಸಕ ಮೃತ್ಯುಂಜಯ್ ಜಿನಗಾ, ಸುರೇಶ್ ಬಾಬು, ಪಿ ರಾಜೀವ್, ತಿಪ್ಪೇಸ್ವಾಮಿ, ಚಿತ್ರನಟಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪೂಜಾ ಗಾಂಧಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉಚಿತ ಸಾಮೂಹಿಕ ವಿವಾಹ ಸ್ವಾಗತ ಸಮಿತಿಯ ಸಹಸಂಚಾಲಕ ಉಮಾಮಹೇಶ್ವರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಂಗೆ 6 ನಾಮನಿರ್ದೇಶಿತರು
ಹಗರಿಬೊಮ್ಮನಹಳ್ಳಿ: ತಾಲೂಕು ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ 6 ಬೆಂಬಲಿಗರನ್ನು ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನಾಗಿಸುವಲ್ಲಿ ಜೆಡಿಎಸ್ ಶಾಸಕ ಎಸ್. ಭೀಮಾನಾಯ್ಕ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ತಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಚಿಂತ್ರಪಳ್ಳಿ ದೇವೇಂದ್ರ, ಜೆಡಿಎಸ್ ಮಹಿಳಾ ಘಟಕಾಧ್ಯಕ್ಷೆ ಕಮಲಮ್ಮ ಕಲ್ಗುಡಿ, ಕಾರ್ಯಕರ್ತರಾದ ಕೊಲುಮಿ ರಹೀಮಾನ್, ಅಲಬೂರು ಮಂಜುನಾಥ ತಾಪಂ ತ್ರೈಮಾಸಿಕ ಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿದ್ದಾರೆ. ಬುಧವಾರ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಜಿ. ಗೋಪ್ಯಾನಾಯ್ಕ, ಈ 6 ಸದಸ್ಯರು ಸರ್ಕಾರದಿಂದ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ಈ 6 ಸದಸ್ಯರು ಬುಧವಾರದ ಸಭೆಯ ಕಲಾಪದಲ್ಲಿ ಹಾಗೂ ವಿವಿಧ ಇಲಾಖೆಗಳ ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದರು.
ನಾಳೆ ವಿದ್ಯುತ್ ವ್ಯತ್ಯಯ
ಬಳ್ಳಾರಿ: ನಗರದ ಎಫ್-23 ಫೀಡರ್ ಕೋಟೆ ಪ್ರದೇಶದಲ್ಲಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುವುದರಿಂದ ಆಗಸ್ಟ್ 16ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಳ್ಳಾರಿ ಕೋಟೆ, ಬಸವನಕುಂಟೆ, ಸುಧಾಕ್ರಾಸ್, ಹೊಸಪೇಟೆ ರಸ್ತೆ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಗ್ರಾಹಕರು ನಿಗಮದೊಂದಿಗೆ ಸಹಕರಿಸುವಂತೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ (ವಿ) ಬಿ.ಟಿ. ಪ್ರಕಾಶ್ ಕುಮಾರ್ ಕೋರಿದ್ದಾರೆ.
ಆರೋಪಿಗಳಿಗೆ 24ರ ತನಕ ನ್ಯಾಯಾಂಗ ಬಂಧನ
ಕೊಟ್ಟೂರು: ಆಗಸ್ಟ್ 5ರಂದು ಪಟ್ಟಣದಲ್ಲಿ ಜರುಗಿದ ನಿವೃತ್ತ ಶಿಕ್ಷಕ ಜವಳಿ ರಾಜಣ್ಣನ ಕೊಲೆ ಮತ್ತು ಅವರ ಮನೆ ಕಳ್ಳತನದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಾದ ಕರಿಬಸಪ್ಪ, ಸಂತೋಷ, ಚಂದ್ರಕಲಾ ಮತ್ತು ಭದ್ರಾವತಿ ಮೂಲಕ ಕುಮಾರ್ ಇವರನ್ನು ಆ.24ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೂಡ್ಲಿಗಿ ಜೆಎಂಎಫ್ಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮೊದಲ ಆರೋಪಿ ಹೋಟೆಲ್ ಮಾಲೀಕ ಕರಿಬಸಪ್ಪ, ಸೂತ್ರಧಾರ ಇಂಡಿಕಾ ಕಾರ್ ಚಾಲಕ ಸಂತೋಷ್, ಆರೋಪಿಗಳಿಂದ ಚಿನ್ನಾಭರಣ ಖರೀದಿಸಿದ್ದ ಭದ್ರಾವತಿ ಜ್ಯುವೆಲರಿ ಶಾಪ್ ಮಾಲೀಕ ಕುಮಾರ ಇವರನ್ನು ಹೂವಿನಹಡಗಲಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಗುರುರಾಜ್ ಎನ್. ಮೈಲಾರ್ ತಿಳಿಸಿದರು. ಬುಧವಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಅವರು, ಮತ್ತೊಬ್ಬ ಮಹಿಳಾ ಆರೋಪಿ ಬ್ಯೂಟಿಪಾರ್ಲರ್ ಕೆಲಸಗಾರ್ತಿ ಹೊಸಪೇಟೆ ಮೂಲದ ಚಂದ್ರಕಲಾಳನ್ನು ಹೊಸಪೇಟೆಯ ಮಹಿಳಾ ಕಾರಾಗೃಹದಲ್ಲಿ ಪ್ರತ್ಯೇಕವಾಗಿರಿಸಲಾಗಿದೆ ಎಂದರು.
ಹೊಸಪೇಟೆ: ಗೋಡೆ ಕುಸಿದು ಮೂವರಿಗೆ ಗಾಯ
ಹೊಸಪೇಟೆ: ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 3 ಜನರು ಗಾಯಗೊಂಡಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಬಸ್ಗಾಗಿ ಕಾಯುತ್ತ ಕುಳಿತಿದ್ದ ಮರಿಯಮ್ಮನಹಳ್ಳಿ ಹೋಬಳಿಯ ಗುಂಡಾ ತಾಂಡದ ನಿವಾಸಿ ಹುಲೆಪ್ಪ ಹಾಗೂ ಕವಿತಾ, ಸ್ಥಳೀಯ ನೂರು ಹಾಸಿಗೆ ಆಸ್ಪತ್ರೆಯ ಡಿ. ಗ್ರೂಪ್ ನೌಕರರ ವೀರಭದ್ರಗೌಡ ಎಂಬುವರಿಗೆ ಗಾಯಗಳಾಗಿದ್ದು, ಗಾಯಾಳುಗಳು ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಗೋಡೆ ಕುಸಿದು ಬಿದ್ದಿದೆ. ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಭಾರಿ ದುರಂತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮಿತಿಗೆ ನೇಮಕ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ 2013-14ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರ ನೇಮಕ ನಡೆಯಿತು. ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ, ಉಪಾಧ್ಯಕ್ಷರಾಗಿ- ಎಚ್. ಪಾಂಡುರಂಗ ಶೆಟ್ಟಿ, ಸದಸ್ಯರಾಗಿ ಮರಡಿ ಹನುಮಂತ, ಬಿ. ವಿಜಯಕುಮಾರ್, ಮಂಜುನಾಥ ಮಣಿಗಾರ್, ಇಮಾಮ್ ಸಾಬ್, ಎನ್.ಎಸ್. ಬುಡೇನ್ ಸಾಬ್, ಎಂ.ವಿ. ಶ್ರೀನಿವಾಸ ಶೆಟ್ಟಿ, ಕಾಲೇಜು ಪ್ರಾಚಾರ್ಯ ಕೆ. ಲಕ್ಷ್ಮಣ ನೇಮಕಗೊಂಡಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಪಾಟೀಲ್ ಹುಟ್ಟುಹಬ್ಬ
ಬಳ್ಳಾರಿ: ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಅವರ 31ನೇ ಜನ್ಮದಿನಾಚರಣೆಯನ್ನು ಯುವ ಕುರುಬರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಯುವ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬತ್ರಿ ರಾಘವೇಂದ್ರ, ರಾಜ್ಯ ನಿರ್ದೇಶಕ ಕರೂರು ವಿರೂಪಾಕ್ಷಿ, ಜಿಲ್ಲಾ ಉಪಾಧ್ಯಕ್ಷ ಈರನಗೌಡ, ಜಿಲ್ಲಾ ಸಂಚಾಲಕ ಕೊಳಗಲ್ಲು ಶಿವರಾಂ, ತಾಲೂಕು ಅಧ್ಯಕ್ಷ ಕೇಶವ್, ಪ್ರಧಾನ ಕಾರ್ಯದರ್ಶಿ ಕೊಳಗಲ್ಲು ಗವಿಸಿದ್ದ, ಖಜಾಂಚಿ ಕಪ್ಪಗಲ್ಲು ಧನಂಜಯ, ನಗರ ಗೌರವಾಧ್ಯಕ್ಷ ಅಂದೇಶ್ ಕುರಿ, ಕೆ.ಎಸ್. ಶ್ರೀಕಾಂತ್, ಎರ್ರಿಸ್ವಾಮಿ, ಶಿವಕುಮಾರ್, ವಿಜಯಕುಮಾರ್, ಬೆಣಕಲ್ ಗಾದಿಲಿಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಾನಪದ ವಿವಿ:ಅರ್ಜಿ ಆಹ್ವಾನ
ಕೊಪ್ಪಳ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವ್ಯಾಪ್ತಿಯ ಬೀದರ್ನ ಪ್ರಾದೇಶಿಕ ಅಧ್ಯಯನ ಕೇಂದ್ರದಲ್ಲಿ ಪ್ರಸಕ್ತ ಸಾಲಿನಿಂದ ವಿವಿಧ ರೆಗ್ಯುಲರ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ವಾತಕೋತ್ತರ ಡಿಪ್ಲೊಮಾ ಕೋರ್ಸ್ಗಳಾದ ಹೈನುಗಾರಿಕೆ ಹಾಗೂ ಜನಪದ ಸಂಗೀತ ಉಪಕರಣಗಳ ನಿರ್ಮಾಣ ಮತ್ತು ಮಾರಾಟ ಕೋರ್ಸ್ಗಳಿಗೆ 20 ಸೀಟ್ಗಳು ಲಭ್ಯವಿದ್ದು, ಯಾವುದೇ ವಿಷಯದಲ್ಲಿ ಪದವಿ ತೇರ್ಗಡೆಯಾಗಿರುವವರು ಅರ್ಜಿ ಸಲ್ಲಿಸಬಹುದು. ಸರ್ಟಿಫಿಕೇಟ್ ಕೋರ್ಸ್ಗಳಾದ ಜನಪದ ಗೀತ ಸಂಪ್ರದಾಯ, ಜನಪದ ವೈದ್ಯ, ಬಿದರಿಕಲೆ, ಸಮರ ಕಲೆ, ಕಸೂತಿ ಕಲೆ, ಜನಪದ ನೃತ್ಯ, ಜನಪದ ಕ್ರೀಡೆ ಕೋರ್ಸ್ಗಳಿಗೆ ರು. 20 ಸೀಟ್ಗಳು ಲಭ್ಯವಿದ್ದು ಹತ್ತನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ಮತ್ತು ಹೆಚ್ಚಿನ ಮಾಹಿತಿಗೆ ಡಾ. ಜಗನ್ನಾಥ ಹೆಬ್ಬಾಳೆ, ಕೋಆರ್ಡಿನೇಟಿಂಗ್ ಆಫೀಸರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಪ್ರಾದೇಶಿಕ ಅಧ್ಯಯನ ಕೇಂದ್ರ, ಕರ್ನಾಟಕ ಕಾಲೇಜ್, ಬೀದರ್ ಮೊ 9448585344ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.