ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿವಿಗೆ ಮುಖ್ಯ ರಾಜ್ಯಪಾಲರೋ, ಸರ್ಕಾರವೋ?

Vishwanath S
Updated On : 15 Aug 2013, 11:18 am

ಬಳ್ಳಾರಿ: ಇಲ್ಲಿವರೆಗೂ ನಡೆದಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ಆಂತರಿಕ ಕಚ್ಚಾಟದಲ್ಲಿ ಉನ್ನತ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಕೊನೆ ಹಾಡಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಹೌದು, ಉನ್ನತ ಶಿಕ್ಷಣ ಇಲಾಖೆಯು ಕುಲಸಚಿವರನ್ನು ವಿವಿಯಲ್ಲಿ ಮುಂದುವರಿಸಿ ಆದೇಶ ಹೊರಡಿಸಿರುವುದರಿಂದ ವಿವಿಯಲ್ಲಿ ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ ಕುಲಪತಿಗಳ ಸರ್ಕಾರದ ಆದೇಶವನ್ನು ಧಿಕ್ಕರಿಸಿ ವಿವಿಗೆ ಸಿಂಡಿಕೇಟ್ ಸಭೆಯೇ ಸುಪ್ರೀಂ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಮಧ್ಯಪ್ರವೇಶಿಸಿ, ಇಬ್ಬರನ್ನು ಕರೆಸಿಕೊಂಡು ಸಮಸ್ಯೆ ಇತ್ಯರ್ಥ ಪಡಿಸಿದರೆ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕಲು ಸಾಧ್ಯ ಎಂಬ ಸಂದೇಶವನ್ನು ಬುಧವಾರ ವಿವಿಯಲ್ಲಿ ನಡೆದ ಘಟನೆ ಸಾರಿ ಹೇಳಿದಂತಾಗಿದೆ. ಅವರೇನಾದು ಮಧ್ಯ ಪ್ರವೇಶಿಸದಿದ್ದರೆ ವಿವಿಯ ಪರಿಸರ ಶೈಕ್ಷಣಿಕ ಕೇಂದ್ರವಾಗುವುದು ಬಿಟ್ಟು, ಗೊಂದಲ ಕೇಂದ್ರವಾಗಿ, ರಾಜಕೀಯ ಪ್ರೇರಿತ ಚಟುವಟಿಕೆಗಳು ಭವಿಷ್ಯದಲ್ಲಿ ನಡೆದರೂ ಆಶ್ಚರ್ಯವಿಲ್ಲ.
ನಮ್ಮದೇ ಮುಖ್ಯ: ಕುಲಸಚಿವರು ಹಾಗೂ ಕುಲಪತಿಗಳ ಮಧ್ಯದ ಗೊಂದಲ ವಿವಿಯಿಂದ ರಾಜ್ಯಪಾಲ, ರಾಜ್ಯ ಸರ್ಕಾರದ ಅಂಗಳಕ್ಕೆ ಶಿಫ್ಟಾದರೆ ಮಾತ್ರ ಪರಿಸ್ಥಿತಿ ತಿಳಿಯಾಗುತ್ತದೆ ಎಂಬ ಬಾವನೆ ಮೂಡಿದೆ. ಕುಲಪತಿಗಳು ರಾಜ್ಯಪಾಲರ ಆದೇಶಕ್ಕೆ ಜೋತುಬಿದ್ದರೆ ಅತ್ತ ಕುಲಸಚಿವರು ರಾಜ್ಯ ಸರ್ಕಾರದ ಆದೇಶಕ್ಕೆ ಅಂಟಿಕೊಂಡಿದ್ದಾರೆ. ಇದರಲ್ಲಿ ಯಾರು ಸತ್ಯವಂತರು ಎಂಬುದು ಎಲ್ಲರಲ್ಲೂ ಗೊಂದಲ ಮೂಡಿಸಿದೆ. ಸಿಂಡಿಕೇಟ್ ಸಭೆಯ ನಿರ್ಧಾರವನ್ನು ರಾಜ್ಯ ಸರ್ಕಾರ ರದ್ದು ಮಾಡುವುದಕ್ಕೆ ಬರುವುದಿಲ್ಲ ಎಂದು ಕುಲಪತಿ ಮಂಜಪ್ಪ ಹೊಸಮನಿ ತಿಳಿಸಿದರೆ, ರಾಜ್ಯ ಸರ್ಕಾರ ತಮ್ಮನ್ನು ನೇಮಕ ಮಾಡಿದೆ, ನಾವು ಇಲ್ಲಿಯೇ ಮುಂದುವರೆಯುತ್ತೇವೆ ಎಂದು ಕುಲಸಚಿವ ವಿಜಯಕುಮಾರ್ ವಾದ ಮಾಡುತ್ತಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ, ಇದೀಗ ಕುಲಪತಿ, ಕುಲಸಚಿವರ ಮಧ್ಯದ ಕಿತ್ತಾಟದಲ್ಲಿ ವಿವಿಯ ಘನತೆಗೆ ಧಕ್ಕೆ ಬರುವಂತಾಗಿದೆ.
ಜೀವಂತವಾಗಿಡುವ ಪ್ರಯತ್ನವೆ?: ಸದ್ಯ ನಡೆದಿರುವ ವಿವಿಯ ಗೊಂದಲದಲ್ಲಿ ಈ ಇಬ್ಬರಲ್ಲಿ ಒಬ್ಬರು ಹಿಂದಕ್ಕೆ ಸರಿಯುವ ಮಾತು ಆಡುತ್ತಿಲ್ಲ. ಒಬ್ಬರು ರಾಜ್ಯ ಸರ್ಕಾರದ ಆದೇಶ ಮುಂದಿಟ್ಟು ಮಾತನಾಡಿದರೆ, ಇನ್ನೊಬ್ಬರು ರಾಜ್ಯಪಾಲರು ಸುಪ್ರೀಂ ಎಂದು ಮಾತನಾಡುತ್ತಾರೆ. ಇಲ್ಲಿ ಯಾರು ಸುಪ್ರೀಂ ಎಂಬುದು ಗೊತ್ತಿಲ್ಲ. ಆದರೆ ಇವರ ಆಂತರಿಕ ಕಿತ್ತಾಟ ಮಾತ್ರ ಬೀದಿಗೆ ಬಂದಿದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಮುಂದಾಗುತ್ತಿಲ್ಲ. ಅಂದರೆ ವಿವಿಯ ಕುಲಪತಿಗಳು, ಕುಲಸಚಿವರ ಮಧ್ಯೆದ ಜಗಳವನ್ನು ಜೀವಂತವಾಗಿಡುವ ಪ್ರಯತ್ನವೇ ಎಂಬ ಅನುಮಾನ ಈಗ ಕಾಡುತ್ತಿದೆ. ಇಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗುತ್ತಿಲ್ಲ ಏಕೆ ಎಂಬುದು ಜನಸಾಮಾನ್ಯರಿಗೆ ತಿಳಿಯದಾಗಿದೆ.
ಪ್ರತಿಷ್ಠೆ ಪ್ರಶ್ನೆಯೇ ಗೊಂದಲಕ್ಕೆ ಕಾರಣ: ಕುಲಪತಿ ಹಾಗೂ ಕುಲಸಚಿವರು ತಮ್ಮ ಪ್ರಭಾವ ಬಳಸಿಕೊಂಡು ಮುಂದೆ ಸಾಗುತ್ತಿರುವುದರಿಂದ ಗೊಂದಲಗಳು ಹಾಗೆಯೇ ಮುಂದುವರೆಯುತ್ತಿವೆ. ಇದರಿಂದಾಗಿ ಸಮಸ್ಯೆಗೆ ನಿಶ್ಚಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಬ್ಬರಿಗೆ ತಿಳಿ ಹೇಳಲು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರು, ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯಪಾಲರಾಗಲಿ ಮುಂದಾಗುತ್ತಿಲ್ಲ. ಇಲ್ಲಿ ಇಬ್ಬರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಯಾರು ಸೋಲುವುದಕ್ಕೂ ಮುಂದಾಗುತ್ತಿಲ್ಲ. ಈ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ. ಹೀಗೆಯೇ ಮುಂದುವರಿದರೆ ಅಧಿಕಾರದ ವಿಷಯ ಬಂದಾಗ ಮುಂದಿನ ದಿನಗಳಲ್ಲೂ ಈ ಕಿತ್ತಾಟಗಳಾಗುವುದರಲ್ಲಿ ಅನುಮಾನವಿಲ್ಲ.
ಪರಿಹಾರಕ್ಕೆ ಯಾರು ಮುಂದು?: ಮೊಟ್ಟೆ ಮೊದಲಾ? ಕೋಳಿ ಮೊದಲ ಎನ್ನುವ ಸಮಸ್ಯೆಗೆ ಯಾರು ಪರಿಹಾರ ಹುಡುಕಲು ಮುಂದಾಗುತ್ತಾರೆ ಎಂಬುದು ವಿವಿಯ ವಿಷಯದಲ್ಲೂ ಕುತೂಹಲ ಕೆರಳಿಸಿದೆ. ವಿಸಿಗೆ ರಾಜ್ಯಪಾಲರು, ಕುಲಸಚಿವರಿಗೆ ಸರ್ಕಾರದ ಆದೇಶ ಮುಖ್ಯ. ವಿವಿಯಲ್ಲಿ ರಾಜ್ಯಪಾಲರ ಮಾತು ಮುಖ್ಯವೋ, ರಾಜ್ಯ ಸರ್ಕಾರದ ಮಾತು ಮುಖ್ಯವೋ ಎಂಬುದಕ್ಕೆ ಸರ್ಕಾರ ಮತ್ತು ರಾಜ್ಯಪಾಲರೇ ಉತ್ತರಿಸಿ ಸಮಸ್ಯೆಗೆ ತೆರೆ ಎಳೆಯಬೇಕಿದೆ. ಈ ಗೊಂದಲದ ವಿಷಯವಾಗಿ ನಿರ್ದಿಷ್ಟ, ದಿಟ್ಟ ನಿರ್ಧಾರ ಕೈಗೊಂಡರೆ ಮಾತ್ರ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ, ಇನ್ನು ಅಂಬೆಗಾಲಿಡುತ್ತಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಏಳಿಗೆಗೆ ಸಹಕಾರಿ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement