ಧ್ವಜಾರೋಹಣಕ್ಕೋಸ್ಕರ ಪಿಚಾರಹಟ್ಟಿಯಲ್ಲಿ ಗಲಾಟೆ
ಕೂಡ್ಲಿಗಿ: ತಾಲೂಕಿನ ಪಿಚಾರಹಟ್ಟಿ(ಸುಲ್ತಾನಪುರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸುವ ಸಂಬಂಧ ಇಬ್ಬರು ಮಾಜಿ ಎಸ್‌ಡಿಎಂಸಿ ಅಧ್ಯಕ್ಷರ ಮಧ್ಯೆ ಗದ್ದಲ ಏರ್ಪಟ್ಟು, ಧ್ವಜಾರೋಹಣ ನಡೆಯದಂತೆ ತಡೆದು ಅಗೌರವ ಸೂಚಿಸಿರುವ ಘಟನೆ ಗುರುವಾರ ನಡೆದಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಅಧಿಕಾರವಧಿ ಮುಗಿದಿದ್ದು, ಬಿಇಓ ಮಂಜುನಾಥ ಅವರು ತಾತ್ಕಾಲಿಕವಾಗಿ ಅಧ್ಯಕ್ಷರ ಆದೇಶವನ್ನು ಗ್ರಾಮದ ಖಾಸಿಂಸಾಬ್‌ಗೆ ನೀಡಿದ್ದಾರೆ. ಅದರಿಂದ ಖಾಸಿಂ ಸಾಬ್ ಗುರುವಾರ ಧ್ವಜಾರೋಹಣಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಮತ್ತೊಬ್ಬ ಮಾಜಿ ಅಧ್ಯಕ್ಷ ಇಮಾಮ್‌ಸಾಬ್ ಪುತ್ರ ಷಫಿವುಲ್ಲಾ ಶಾಲಾ ಆವರಣಕ್ಕೆ ಬಂದು ಮಾಜಿ ಆಗಿದ್ದವರಿಗೆ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಗಲಾಟೆಗೆ ಮುಂದಾಗಿದ್ದಾನೆ. ಬಿಇಒ ಆದೇಶ ಇರುವ ಪ್ರತಿಯನ್ನು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಅವರು ಷಫೀವುಲ್ಲಾ ನಿಗೆ ತೋರಿಸಿದರೂ ಸಹ ಮುಖ್ಯ ಶಿಕ್ಷಕರ ಜೊತೆ ಅಸಭ್ಯವಾಗಿ ವರ್ತಿಸಿ ಧ್ವಜಾರೋಹಣ ನಡೆಸದಂತೆ ತಡೆದಿದ್ದಾನೆ. ಈ ಆರೋಪ ಸುದ್ದಿ ತಾಲೂಕಾದ್ಯಾಂತ ಹರಡಿದೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದ ತಕ್ಷಣ ಹೊಸಹಳ್ಳಿ ಪೊಲೀಸರು ಪಿಚಾರಹಟ್ಟಿಗೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಎಎಸ್‌ಐ ನಾಗರಾಜ, ಜಿತೇಂದ್ರ ಸೇರಿ ಪೊಲೀಸರ ಸಮ್ಮುಖದಲ್ಲಿ ಧ್ವಜಾರೋಹಣವನ್ನು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಧ್ವಜ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ಅವಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಪ್ರಕರಣ ದಾಖಲಾಗಿಲ್ಲ.