ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ ಸ್ವಾತಂತ್ರ್ಯ ಹೋರಾಟ ಭಾವೈಕ್ಯ ಸಂಕೇತ

Lingaraj Badiger
Updated On : 16 Aug 2013, 11:44 am

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ ಗಾಂಧಿವಾದ ಸ್ವರೂಪದ್ದಾಗಿದ್ದು, ಇಲ್ಲಿನ ಹೋರಾಟವು ರಾಷ್ಟ್ರೀಯ ಭಾವೈಕ್ಯ ಸಂಕೇತವಾಗಿತ್ತು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಗ್ರಗಣ್ಯರ ಪಾದಸ್ಪರ್ಶ, ಸೆರೆಮನೆ ವಾಸ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಟೇಕೂರು ಸುಬ್ರಮಣ್ಯಂ, ಟಿ.ಬಿ. ಕೇಶವರಾವ್, ಕೊಟ್ಟೂರಿನ ಗೊರ್ಲಿ ಶರಣಪ್ಪ, ಗೊರ್ಲಿ ರುದ್ರಮ್ಮ, ಡಾ೤ ಅನಂಜಪ್ಪ, ಚಿದಾನಂದ ಶಾಸ್ತ್ರಿಗಳು, ಕೊ. ಚನ್ನಬಸಪ್ಪ, ಗೌಡಪ್ಪ, ಬಿಂದು ಮಾಧವರಾವ್, ಬುರ್ಲಿ ಶೇಷಣ್ಣ, ಬೆಲ್ಲದ ಚನ್ನಪ್ಪ, ಬುಸುಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ, ಬಾದನಹಟ್ಟಿ ವೆಂಕೋಬರಾವ್, ಲಕ್ಷ್ಮೀದೇವಿ ಇನ್ನಿತರ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮಾ ಗಾಂಧೀಜಿ, ಬಾಲ ಗಂಗಾಧರ ತಿಲಕ್‌ರಂಥ ರಾಷ್ಟ್ರ ನಾಯಕರು ಬಳ್ಳಾರಿಗೆ ಆಗಮಿಸಿದ್ದರು. ಚಕ್ರವರ್ತಿ ರಾಜಗೋಪಾಲಚಾರಿ,  ಪೊಟ್ಟಿ ಶ್ರೀರಾಮುಲು, ಕಾಮರಾಜ್, ಟಿ.ವಿ. ಸುಬ್ಬಾಶೆಟ್ಟಿ, ಬೇಜವಾಡ ಗೋಪಾಲರೆಡ್ಡಿಯಂಥ ಅಗ್ರಗಣ್ಯ ಹೋರಾಟಗಾರರನ್ನು ಅಲ್ಲಿಪುರ ಜೈಲಿನಲ್ಲಿರಿಸಲಾಗಿತ್ತು ಎಂದರು.
ಹೈ-ಕಗೆ ಅನುದಾನ ಬಿಡುಗಡೆ: ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನ ತಿದ್ದುಪಡಿ ಕಾಯ್ದೆ 371(ಜೆ) ವಿಧಿ ಅನ್ವಯ ಕರಡು ನಿಯಮಗಳನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿ ರಾಷ್ಟ್ರಪತಿಗೆ ಕಳುಹಿಸಿಕೊಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಪ್ರಕೃತಿ ವಿಕೋಪ-ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ 1,300 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.
ಅನುದಾನ: ಮೇವಿನ ಅಭಾವ ಉಂಟಾದ ಕೂಡ್ಲಿಗಿ, ಸಂಡೂರು ಮತ್ತು ಹೊಸಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮೇವನ್ನು ಖರೀದಿಸಿ ಉಚಿತ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 315.00 ಟನ್ ಮೇವನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಸಂಡೂರು ತಾಲೂಕಿನ ಚೋರನೂರು ಗ್ರಾಮ ಮತ್ತು ಕೂಡ್ಲಿಗಿ ತಾಲೂಕಿನ ಗಂಡ ಬೊಮ್ಮನಹಳ್ಳಿ ಗ್ರಾಮದಲ್ಲಿ ತಲಾ ಒಂದು ಗೋಶಾಲೆ ಪ್ರಾರಂಭಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಶೇಷ ಘಟಕ ಯೋಜನೆಯ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಸೌಲಭ್ಯಗಳನ್ನು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ ರು. 1 ಕೋಟಿ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ರು. 50 ಲಕ್ಷವನ್ನು ವಿನಿಯೋಗಿಸಲಾಗುವುದು. ಡಾ೤ ಬಿ.ಆರ್. ಅಂಬೇಡ್ಕರ್ ಭವನ ಮತ್ತು ಡಾ೤ ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ರು. 280 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕಿಗೆ ತಲಾ ರು. 1 ಕೋಟಿಯಂತೆ ಒಟ್ಟು  ರು. 3 ಕೋಟಿ ಅನುದಾನವನ್ನು ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯ್ತಿ ವಿಭಾಗಮಟ್ಟದ ನೈರ್ಮಲ್ಯ ಯೋಜನೆಯಡಿ ಸ್ವರ್ಣ ನೈರ್ಮಲ್ಯ ಪ್ರಥಮ ಬಹುಮಾನ ಪಡೆದಿದೆ ಎಂದರು.
ಜಿಲ್ಲಾ ಸಶಸ್ತ್ರ ಪಡೆ ನೇತೃತ್ವದಲ್ಲಿ ಎನ್‌ಸಿಸಿ, ಗೃಹ ರಕ್ಷಕ ದಳ, ವಿವಿಧ ಶಾಲೆಗಳ ತಂಡಗಳು ಸೇರಿದಂತೆ ಒಟ್ಟು 42 ತಂಡಗಳು ಆಕರ್ಷಕವಾಗಿ ಪಥ ಸಂಚಲನೆ ನಡೆಸಿದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟ ಕುರಿತ ರೂಪಕಗಳನ್ನು ನಡೆಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಈ ಸಂದರ್ಭ ಸಂಸದೆ ಜೆ. ಶಾಂತ, ಶಾಸಕರಾದ ಅನಿಲ್ ಎಚ್. ಲಾಡ್, ವಿಪ ಸದಸ್ಯರಾದ ಮೃತ್ಯುಂಜಯ ಜಿನಗಾ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ೤ ಚೇತನ್ ಸಿಂಗ್ ರಾಥೋರ್, ಜಿಪಂ ಸಿಎಒ ಮಂಜುನಾಥ ನಾಯ್ಕ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಾವಂತರಿಗೆ ಸನ್ಮಾನ
ಬಳ್ಳಾರಿ: ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕ ದಳದ ಸಹಾಯಕ ಬೋಧಕ ಎಚ್. ತಿಪ್ಪೇಸ್ವಾಮಿ, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಿಕಂದರ ಸಾಬ್, ಸಿದ್ದಪ್ಪರಿತ್ತಿ, ಪೌರ ಕಾರ್ಮಿಕ ಮುಕುಂದ ಮತ್ತು ಅಂಕಮ್ಮ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಐದು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ವಿಕಲಚೇತನರಿಗೆ ಆಡಿಪ್ ಯೋಜನೆ ಅಡಿ ವಿವಿಧ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಭಾಗ್ಯಲಕ್ಷ್ಮಿ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಬಾಂಡ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಸಂಸದೆ ಜೆ. ಶಾಂತ, ಶಾಸಕರಾದ ಅನಿಲ್ ಎಚ್. ಲಾಡ್, ವಿಪ ಸದಸ್ಯರಾದ ಮೃತ್ಯುಂಜಯ ಜಿನಗಾ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ೤ ಚೇತನ್ ಸಿಂಗ್ ರಾಥೋರ್, ಜಿಪಂ ಸಿಇಒ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement