ವಿದ್ಯಾರ್ಥಿ ಸ್ವಯಂ ಸರ್ಕಾರ ಇನ್ನು ಕಡ್ಡಾಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 16
ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಇರುವ ವಿದ್ಯಾರ್ಥಿ ಸ್ವಯಂ ಸರ್ಕಾರದ ಕಲ್ಪನೆಯನ್ನು ಪ್ರತಿ ಶಾಲೆಗಳು ಕಡ್ಡಾಯ, ನಿರ್ದಿಷ್ಟ ದಿನದಂದು ಮಾಡುವಂತೆ ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಎಲ್ಲ ಬಿಇಒಗಳಿಂದ ಆಯಾ ಶಾಲೆಗಳಿಗೆ ಸೂಚನೆ ನೀಡಿದೆ. ಆ ಮೂಲಕ ಮಕ್ಕಳಲ್ಲಿ ಶಿಕ್ಷಣದೊಂದಿಗೆ, ಪ್ರಜಾಪ್ರಭುತ್ವದ ಕಲ್ಪನೆ ಸೇರಿದಂತೆ ಸಂಘಟನಾತ್ಮಕ ವಿಷಯಗಳಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ.
2013-14ನೇ ಸಾಲಿಗೆ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಸಂಶೋಧನೆ, ಮೌಲ್ಯಮಾಪನ, ಉಸ್ತುವಾರಿ ಮತ್ತು ಮೇಲ್ವಿಚಾರಣೆ ಮಧ್ಯಪ್ರವೇಶಿಕೆಯ ಅನುಮೋದಿ ಕಾರ್ಯ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದೆ. ಬಿಆರ್ಸಿಗಳ ಸಹಯೋಗದೊಂದಿಗೆ ಕಾರ್ಯ ಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ರಾಜ್ಯದ ಎಲ್ಲ ಡಯಟ್ ಪ್ರಾಚಾರ್ಯರಿಗೆ ಹಾಗೂ ಉಪನಿರ್ದೇಶಕ (ಆಡಳಿತ)ರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಸ್ವಯಂ ಸರ್ಕಾರ ಹಾಗೂ ತರಗತಿಗೊಂದು ಪ್ಯಾನಲ್ ಬೋರ್ಡ್ ಕಡ್ಡಾಯ ಎಂದು ಹೇಳುವ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿದೆ. ಈ ಹಿಂದೆ ಬಹುತೇಕ ಶಾಲೆಗಳು ಈ ವ್ಯವಸ್ಥೆಯನ್ನು ಗಾಳಿಗೆ ತೂರಿದ್ದವು. ಇದನ್ನು ತಪ್ಪಿಸಲು ಇಲಾಖೆಯು ಜಿಲ್ಲೆಯಲ್ಲಿ ಏಕಕಾಲದಲ್ಲೇ (ಆ. 29ರಂದು) ವಿದ್ಯಾರ್ಥಿಗಳ ಸ್ವಯಂ ಸರ್ಕಾರದ ಚಟುವಟಿಕೆ ಮಾಡಬೇಕೆಂದು ಆದೇಶ ನೀಡಿದೆ.
ಸ್ವಯಂ ಸರ್ಕಾರದ ಉದ್ದೇಶ: ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅಂದರೆ ಏನು? ಯಾವ ರೀತಿ ಚುನಾವಣೆ ನಡೆಯುತ್ತವೆ? ನಾಮಪತ್ರ ಸಲ್ಲಿಕೆ, ಮತದಾನ, ಜನಪ್ರತಿನಿಧಿಗಳ ಆಯ್ಕೆ, ಹೇಗೆ ಸರ್ಕಾರ ರಚನೆಯಾಗುತ್ತದೆ? ಮಂತ್ರಿಗಳ ಖಾತೆಗಳು, ಮುಖ್ಯಮಂತ್ರಿ, ಆಡಳಿತ ಪಕ್ಷ, ವಿರೋಧಪಕ್ಷಗಳೆಂದರೆ ಯಾವುವು ಎಂಬ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿ ಎಂಬ ಕಾರಣಕ್ಕೆ ಸರ್ಕಾರ ಈ ಕಲ್ಪನೆ ತಂದಿದೆ. ಆದರೂ ಬಹುತೇಕ ಶಾಲೆಗಳು ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳ ಸ್ವಯಂ ಸರ್ಕಾರದ ಚಟುವಟಿಕೆ ಮಾಡುತ್ತಿರಲಿಲ್ಲ.
ಕಟ್ಟುನಿಟ್ಟು ಸೂಚನೆ: ವಿದ್ಯಾರ್ಥಿಗಳ ಸ್ವಯಂ ಸರ್ಕಾರ ಎಂಬುದು ಪ್ರಜಾಪ್ರಭುತ್ವದ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸಲು ಸಹಕಾರಿಯಾಗುವ ಒಂದು ಚಟುವಟಿಕೆ. ಇದು 15ರಿಂದ 20 ವಿದ್ಯಾರ್ಥಿಗಳಿರುವ ಒಂದು ತಂಡ, ವಿದ್ಯಾರ್ಥಿಗಳಿಂದ ಆಯ್ಕೆ ಮಾಡಲ್ಪಟ್ಟ ಈ ಸದಸ್ಯರಲ್ಲಿ ಒಬ್ಬರು ವಿದ್ಯಾರ್ಥಿ ಸ್ವಯಂ ಸರ್ಕಾರದ ನಾಯಕರಾಗುತ್ತಾರೆ. 4-5 ವಿದ್ಯಾರ್ಥಿಗಳ ಗುಂಪುಗಳು ಶಾಲೆಯ ವಿವಿಧ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. ಹೀಗೆ ವಿದ್ಯಾರ್ಥಿಗಳು ಪ್ರಜಾಸತ್ತಾತ್ಮಕ ಸ್ವಯಂ ಸರ್ಕಾರದ ಕಲ್ಪನೆಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದರು.
ಸಾಹಿತ್ಯಿಕ, ಸಾಂಸ್ಕೃತಿಕ, ವಿಜ್ಞಾನ, ಮೀನಾ, ಕ್ರೀಡಾ ಸಂಘಗಳನ್ನು ರಚಿಸಿ ವಿದ್ಯಾರ್ಥಿಗಳಲ್ಲಿ ಸಂಘಟನಾತ್ಮಕ, ನಾಯಕತ್ವ ಗುಣ ಬೆಳೆಸುವ ಪ್ರಯತ್ನವಿದು. ಅಲ್ಲದೇ ಮಕ್ಕಳಲ್ಲಿನ ಸೃಜನಶೀಲತೆ ಪ್ರೋತ್ಸಾಹಿಸುವುದು ಶಿಕ್ಷಣದ ಪ್ರಮುಖ ಆಶಯಗಳಲ್ಲಿ ಒಂದಾಗಿರುವುದರಿಂದ ಮಕ್ಕಳು ಬರೆಯುವ ಕಥೆ, ಕವನ, ಲೇಖನ, ಸಂಗ್ರಹಿಸುವ ವಸ್ತುಗಳು, ಸಂಗ್ರಹಿಸುವ ಪತ್ರಿಕಾ ತುಣಕುಗಳು ಇತ್ಯಾದಿಗಳನ್ನು ಪ್ಲಾನೆಲ್ಬೋರ್ಡ್ಗೆ ಅಳವಡಿಸಬೇಕು, ಇಂತಹ ಪ್ಲಾನೆಲ್ ಬೋರ್ಡ್ ವ್ಯವಸ್ಥೆ ಕಡ್ಡಾಯ ಎಂಬುದನ್ನು ಇಲಾಖೆ ಸೂಚಿಸಿದೆ.
ಸರ್ಕಾರದ ಅನೇಕ ಯೋಜನೆಗಳು ಕೇವಲ ಕಾಗದಕ್ಕೆ ಸೀಮಿತ ಎನ್ನುವುದು ಜನಜನಿತ. ಅದಕ್ಕೆ ಶಿಕ್ಷಣ ಇಲಾಖೆ ಹೊರತಲ್ಲ. ಆದರೆ ಇಲಾಖೆಯು ಇಂತಹ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಮುಂದಾಗಿರುವುದು ಉತ್ತಮ ಕಾರ್ಯವೇ ಸರಿ.
-ಶಶಿಧರ ಮೇಟಿ