ಹೊಸಪೇಟೆ: ವಿದ್ಯಾರ್ಥಿ ಕೊಲೆ
ಹೊಸಪೇಟೆ: ಬಿಬಿಎಂ ವಿದ್ಯಾರ್ಥಿಯೊಬ್ಬನನ್ನು ಕೊಲೆಗೈದಿರುವ ಘಟನೆ ನಗರದ ಅಮರಾವತಿಯಲ್ಲಿ ಶುಕ್ರವಾರ ನಡೆದಿದೆ.
ಹೂವಿನಹಡಗಲಿಯ ನಿವಾಸಿ ಹಾಗೂ ಸ್ಥಳೀಯ ವಿಜಯನಗರ ಕಾಲೇಜಿನ ಬಿಬಿಎಂ (ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್) 5ನೇ ಸೆಮಿಸ್ಟರ್ ವಿದ್ಯಾರ್ಥಿ ನಾಗರಾಜ್(21) ಎಂಬಾತನೆ ಕೊಲೆಯಾಗಿರುವ ವಿದ್ಯಾರ್ಥಿ.
ಹೂವಿನಹಡಗಲಿಯಲ್ಲಿ ಬಿಬಿಎಂ ಕಾಲೇಜಿನಲ್ಲಿ ಕಡಿಮೆ ವಿದ್ಯಾರ್ಥಿಗಳು ಇರುವುದರಿಂದ ಬಿಬಿಎಂ ಕಾಲೇಜ್ ಮುಚ್ಚಿದ ಕಾರಣ, ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಬಿಬಿಎಂ 5ನೇ ಸೆಮಿಸ್ಟರ್‌ಗೆ ಸೇರ್ಪಡೆಗೊಂಡು ಒಂದು ತಿಂಗಳಾಗಿದ್ದು, ನಗರದ ಅಮರಾವತಿಯಲ್ಲಿ ತನ್ನ ಸ್ನೇಹಿತರೊಂದಿಗೆ ಬಾಡಿಗೆ ರೂಂ ಮಾಡಿಕೊಂಡಿದ್ದರು.
ಶುಕ್ರವಾರ ಬೆಳಗ್ಗೆ ರೂಂನಲ್ಲಿರುವ ಸ್ನೇಹಿತರು ಇಲ್ಲದ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ನಾಗರಾಜ್‌ನನ್ನು ಕೊಲೆಗೈದಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೈದ ಆರೋಪಿಗಳ ಶೋಧನೆಗಾಗಿ ಗ್ರಾಮಾಂತರ ಪೊಲೀಸರು ಶೋಧನಾ ಕಾರ್ಯ ನಡೆಸಿದ್ದಾರೆ. ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಟಾ ಏಸ್-ಬೈಕ್ ಡಿಕ್ಕಿ: ಇಬ್ಬರ ಸಾವು
ಹೂವಿನಹಡಗಲಿ: ತಾಲೂಕಿನ ಹೊನ್ನನಾಯಕನಹಳ್ಳಿ ಬಳಿ ಶುಕ್ರವಾರ ಟಾಟಾ ಏಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಸಿಂಟಾಲೂರು ಏತನೀರಾವರಿ ಯೋಜನೆಯ ಕಾಲುವೆ ಕಾಮಗಾರಿ ಕೆಲಸ ಮಾಡಲು ಬಂದಿದ್ದ ಜಾರ್ಖಂಡ್ ಮೂಲದ ಕಾರ್ಮಿಕರಾಗಿರುವ ಕುಲದೀಪ್ (20), ಸುನೀಲ್ (20) ಎಂಬಿಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ಏಸ್ ಹಾಗೂ ಬೈಕ್ ಸವಾರರು ಅತಿ ವೇಗದಲ್ಲಿ ಸಂಚರಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಆದರಿಂದ ಈ ಇಬ್ಬರ ಮೇಲೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು 50 ವರ್ಷದವನಾಗಿದ್ದು, ಎಣ್ಣೆಗೆಂಪು ಬಣ್ಣ, ದೃಢವಾದ ಮೈಕಟ್ಟು ಹೊಂದಿದ್ದಾನೆ. ಬಿಳಿ ಶರ್ಟ್ ಧರಿಸಿದ್ದಾನೆ. ಹೆಚ್ಚಿನ ವಿವರಕ್ಕೆ ಟಿಬಿ ಡ್ಯಾಂ ಪೊಲೀಸ್ ಠಾಣೆ ದೂ 08394-259233, ಅಥವಾ ಹೊಸಪೇಟೆ ಕಂಟ್ರೋಲ್ ರೂಂ ಸಂಪರ್ಕಿಸಬಹುದು.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಬಳ್ಳಾರಿ: ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಓರ್ವನಿಗೆ ಗಾಯವಾಗಿರುವ ಘಟನೆ ಗಾದಿಗನೂರ ಠಾಣೆ ವ್ಯಾಪ್ತಿಯ ಮಧು ಡಾಬಾ ಸಮೀಪದಲ್ಲಿ ನಡೆದಿದೆ. ಎಚ್. ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ ಎನ್ನಲಾಗಿದೆ. ರಾಮು ಎಂಬಾತ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆ. 15ರಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊಸಪೇಟೆಯಿಂದ ಬರುತ್ತಿದ್ದ ಲಾರಿಯು ತೋರಣಗಲ್ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಮು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.