ಅಂತಾರಾಷ್ಟ್ರೀಯ ವೇಶ್ಯಾವಾಟಿಕೆ ಜಾಲ ಪತ್ತೆ
ಬಳ್ಳಾರಿ: ನಗರದ ಹೊರವಲಯದ ಡಿಸಿ ನಗರದಲ್ಲಿರುವ ವೇಶ್ಯಾವಾಟಿಕೆ ಅಡ್ಡೆ ಮೇಲೆ ಎಸ್ಪಿ ನೇತೃತ್ವದ ಪೊಲೀಸರ 3 ತಂಡಗಳು ದಾಳಿ ನಡೆಸಿ, 32 ಬಾಲಕಿಯರು ಸೇರಿ 78 ಮಹಿಳೆಯರು ಹಾಗೂ ಎಂಟು ಪುರುಷರನ್ನು ವಶಕ್ಕೆ ತೆಗೆದುಕೊಂಡಿವೆ. 31 ಜನರ ವಿರುದ್ಧ ದೂರು ದಾಖಲಿಸಿ, 47 ಮಹಿಳೆಯರನ್ನು ರಕ್ಷಿಸಲಾಗಿದೆ. 3.9 ಲಕ್ಷ ನಗದು, 3 ಕಾಂಡೋಂ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಜಸ್ಟಿಸ್ ಆ್ಯಂಡ್ ಕೇರ್ ಎಂಬ ಎನ್ಜಿಒ ಮಾಹಿತಿ ಹಾಗೂ ಸಹಕಾರದ ಮೇರೆಗೆ ಎಸ್ಪಿ ಡಾ. ಚೇನತ್ ಸಿಂಗ್ ರಾಥೋಡ್ 3 ತಂಡಗಳೊಂದಿಗೆ ಶನಿವಾರ ಮಧ್ಯಾಹ್ನ ನಗರದ ಹೊರವಲಯದಲ್ಲಿರುವ ಡಿಸಿ ನಗರದಲ್ಲಿ ಏಕಏಕಿ ದಾಳಿ ನಡೆಸಿದಾಗ ಈ ಜಾಲ ಪತ್ತೆಯಾಗಿದೆ.
ಅಂತಾರಾಷ್ಟ್ರೀಯ ಜಾಲದ ಶಂಕೆ: ದಾಳಿ ವೇಳೆ ವಶಕ್ಕೆ ತೆಗೆದುಕೊಂಡಿರುವ ಯುವತಿಯರಲ್ಲಿ ಮೂವರು ಬಾಂಗ್ಲಾದೇಶದವರಾಗಿದ್ದು, ಇದು ಅಂತಾರಾಷ್ಟ್ರೀಯ ವೇಶ್ಯಾವಾಟಿಕೆ ಜಾಲ ಎನ್ನಲಾಗುತ್ತಿದೆ. ಅಲ್ಲದೇ ಕರ್ನಾಟಕ, ಆಂಧ್ರದವರೂ ಈ ತಂಡದಲ್ಲಿದ್ದಾರೆ. ಬಂಧಿತ ಯುವತಿಯರು ಬಂಗಾಲಿ, ತೆಲುಗು, ಕನ್ನಡ ಮಾತನಾಡುತ್ತಿದ್ದರು. ಬಂಧಿತರಲ್ಲಿ 23 ಮಹಿಳೆಯರು ಹಾಗೂ 8 ಪುರುಷರೇ ವೇಶ್ಯಾವಾಟಿಕೆ ಮೂಲ ಕಾರಣಕರ್ತರೆಂದು ಪೊಲೀಸರು ತಿಳಿಸಿದ್ದು, ಅವರ ವಿಚಾರಣೆ ಮುಂದುವರಿಸಿ, ಶನಿವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸಿದ್ಧತೆಯೊಂದಿಗೆ ಪೊಲೀಸ್ ತಂಡ: ಖಚಿತ ಮಾಹಿತಿ ದೊರೆತ ಪೊಲೀಸರು ಮುಂಜಾಗೃತ ಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಇನ್ಸ್ಪೆಕ್ಟರ್ಗಳಾದ ಸುಲೇಮಾನ್ ತಹಸೀಲ್ದಾರ್, ಮಲ್ಲೇಶ ದೊಡ್ಡಮನಿ, ಪಿಎಸ್ಐ ಸೋಮಶೇಖರ್, ಚಂದನ್ಕುಮಾರ್ ಸೇರಿದಂತೆ ಸುಮಾರು 50 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಸ್ಟಿಸ್ ಆ್ಯಂಡ್ ಕೇರ್ನ 20ಕ್ಕೂ ಹೆಚ್ಚು ಕಾರ್ಯಕರ್ತರು ಏಕಕಾಲದಲ್ಲಿ ಈ ದಾಳಿ ನಡೆಸಿದ್ದರಿಂದ ಈ ವೇಶ್ಯಾವಾಟಿಕೆ ತೀವ್ರತೆ ಪತ್ತೆಯಾಗಿದೆ.