ಸ್ವಯಂ ರಕ್ಷಣೆಗೆ ಕರಾಟೆ ಕಲಿಯಿರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 17
ಅತ್ಯುತ್ತಮ ರಕ್ಷಣಾ ಕಲೆಯಾಗಿರುವ ಕರಾಟೆ ಕಲಿಕೆಯನ್ನು ಮಹಿಳೆಯರೂ ಸಹ ಸ್ವಯಂ ರಕ್ಷಣೆಗಾಗಿ ಕಲಿಯುವುದು ಅತ್ಯವಶ್ಯಕವಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಂ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ಬಳ್ಳಾರಿಯ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಶನಿವಾರದಿಂದ ಹಮ್ಮಿಕೊಂಡಿರುವ ಎರಡು ದಿನಗಳ ದಕ್ಷಿಣ ಭಾರತ ಮಟ್ಟದ ಕರಾಟೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಅಭಿಮಾನ ಮೂಡಲಿ: ದೇಶದಲ್ಲಿ ಇತ್ತೀಚೆಗೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಸ್ವಯಂ ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕಿದೆ. ವಿದ್ಯಾರ್ಥಿಗಳಲ್ಲಿ ಕರಾಟೆ ವಿದ್ಯೆಯ ಬಗ್ಗೆ ಇನ್ನು ಹೆಚ್ಚಿನ ಅಭಿಮಾನ ಮೂಡಿಸಲು ಹಾಗೂ ಪ್ರತಿಯೊಬ್ಬರು ತಮ್ಮನ್ನು ತಾವು ಆತ್ಮರಕ್ಷಣೆ ಮಾಡಿಕೊಳ್ಳಲು ಕರಾಟೆ ತರಬೇತಿ ಪಡೆಯಬೇಕು. ಈ ನಿಟ್ಟಿನಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಸಂಸ್ಥೆ ನಗರದಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವ ಜತೆಗೆ ಇಂತಹ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದರು.
ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಅಲ್ಲಂ ದೊಡ್ಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು-ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು. ಕರಾಟೆ ಸ್ಪರ್ಧೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ಬೆಂಗಳೂರು, ಗದಗ, ಗುಲ್ಬರ್ಗಾ, ಶಿವಮೊಗ್ಗ, ದಾವಣಗೆರೆ ಇತರೆಡೆಯಿಂದ ಸುಮಾರು 700ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.
ಕಾರ್ಯರ್ಯಕ್ರಮದ ಆರಂಭದಲ್ಲಿ ಕರಾಟೆಯಲ್ಲಿನ ಹಲವಾರು ವಿಧಗಳನ್ನು ಪ್ರದರ್ಶಿಸಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗೋನಾಳ ರಾಜಶೇಖರಗೌಡ, ಕರವೇ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜ ಸ್ವಾಮಿ, ಬೆಳಗಲ್ಲು ಯುವರಾಜಗೌಡ, ಕರಾಟೆ ತರಬೇತುದಾರ ತಮಿಳುನಾಡಿನ ಸುಂದರಂ, ಕೇರಳದ ಕ್ಯಾಲಿಕಟ್ನ ಷಣ್ಮುಗಂ, ಸಿ.ಎಂ. ಗುರುಬಸವರಾಜ್, ಶಬರಿ ರವಿಚಂದ್ರ, ಟ್ರಸ್ಟ್ ಅಧ್ಯಕ್ಷ ಎಂ. ಮೃತ್ಯುಂಜಯ ಸ್ವಾಮಿ ಸೇರಿದಂತೆ ಕರಾಟೆ ಸ್ಪರ್ಧಾರ್ಥಿಗಳ ಪಾಲಕ, ಪೋಷಕರು ಮತ್ತು ಇತರರು ಇದ್ದರು.