ಅರಸು ಜನ್ಮದಿನಾಚರಣೆ: ಪೂರ್ವಭಾವಿ ಸಭೆ
ಬಳ್ಳಾರಿ: ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ 67ನೇ ಜನ್ಮದಿನಾಚರಣೆಯ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆ. 20ರಂದು ಡಿ. ದೇವರಾಜ ಅರಸು ಅವರ ಜನ್ಮದಿನವನ್ನು ನಗರದ ಡಿ. ದೇವರಾಜ ಅರಸು ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ಸಮಾರಂಭದ ಆಸನ, ವೇದಿಕೆ ಮತ್ತಿತರ ವ್ಯವಸ್ಥೆಯನ್ನು ನಿರ್ವಹಿಸಲು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗೆ ಸೂಚಿಸಲಾಯಿತು. ಕಾರ್ಯಕ್ರಮವನ್ನು ಶಿಷ್ಟಾಚಾರದನ್ವಯ ಏರ್ಪಡಿಸಲು ಅನುವಾಗುವಂತೆ ಆಮಂತ್ರಣ ಪತ್ರಿಕೆಗಳನ್ನು ಜನಪ್ರತಿನಿಧಿಗಳು, ಮತ್ತಿತರ ಗಣ್ಯರಿಗೆ ಹಾಗೂ ಅಧಿಕಾರಿಗಳಿಗೆ ನೀಡಿ ಆಹ್ವಾನಿಸುವಂತೆ ಬಿಸಿಎಂ ಅಧಿಕಾರಿಗಳಿಗೆ ಸೂಚಿಸಲಾಯಿತು. ಡಿ. ದೇವರಾಜ ಅರಸು ಭವನದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲು ಹಾಗೂ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ವೇದಿಕೆಯ ಸುತ್ತ ಅಲಂಕಾರಿಕ ಕುಂಡ ಮತು ಹೂವಿನ ಅಲಂಕಾರ ಮಾಡಲು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಲಾಯಿತು. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ನಂದೀಶ್, ಡಿಡಿಪಿಐ ನಾರಾಯಣಗೌಡ, ಕೃಷಿ ಜಂಟಿ ನಿರ್ದೇಶಕ ರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ, ಪಾಲಿಕೆ ಆಯುಕ್ತ ಚಿಕ್ಕಣ್ಣ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಬಿಸಿಎಂ ಅಧಿಕಾರಿ ರಾಚಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಡಿ. ದೇವರಾಜ ಅರಸು ವೇದಿಕೆ ಅಧ್ಯಕ್ಷ ಕಲ್ಲುಕಂಬ ಪಂಪಾಪತಿ, ಉಪಾಧ್ಯಕ್ಷ ಎಂ. ಪಂಪಾಪತಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.