ಇಂದು ಕ್ರೀಡಾಕೂಟ
ಹಗರಿಬೊಮ್ಮನಹಳ್ಳಿ: ತಾಲೂಕಿನ ಗಡಿಗ್ರಾಮ ಹಂಪಸಾಗರದ ಸೇವಾಲಾಲ್ ಎನ್.ಎಂ. ಪದವಿಪೂರ್ವ ಕಾಲೇಜು ಆವರಣದಲ್ಲಿ ಆ. 19, 20ರಂದು ಹಗರಿಬೊಮ್ಮನಹಳ್ಳಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಜರುಗಲಿದೆ. ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕ್ರೀಡಾಕೂಟ ಉದ್ಘಾಟಿಸಲಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ವಂದನೆ ಸ್ವೀಕರಿಸಲಿದ್ದಾರೆ. ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಬ್ದುಲ್ ರಷೀದ್ ಕ್ರೀಡಾಧ್ವಜಾರೋಹಣ ನೇರವೇರಿಸಿದರೆ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ ಕ್ರೀಡಾ ಜ್ಯೋತಿ ಬೆಳಗಿಸುವರು. ಸೇವಲಾಲ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಮೀನಾಕ್ಷಿ ನಾಣಿಕೀನಾಯ್ಕ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ್, ತಾಪಂ ಸದಸ್ಯ ಕೆ. ಉಮೇಶ, ಗ್ರಾಪಂ ಅಧ್ಯಕ್ಷ ಎಚ್. ಬಸವರಾಜ, ತಹಸೀಲ್ದಾರ್ ಎಜಾಜ್ ಬೇಗ್, ತಾಪಂ ಇಒ ಜಿ. ಗೋಪ್ಯಾನಾಯ್ಕ, ಭಾಸ್ಕರ್ರಾಜ್ ಭಾಗವಹಿಸಲಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟ: ಇದೇ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆ. 21,22ರಂದು ಮೋರಿಗೇರಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಜರುಗಲಿದೆ. ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕ ಎಸ್. ಭೀಮಾನಾಯ್ಕ ಸೇರಿದಂತೆ ಹಲವು ಗಣ್ಯರು ಕೂಟದಲ್ಲಿ ಭಾಗವಹಿಸಲಿದ್ದಾರೆ.
21ರಿಂದ ಆರಾಧನೆ
ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯ ಗಣೇಶನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 342ನೇ ಆರಾಧನಾ ಮಹೋತ್ಸವ ಆ. 21ರಿಂದ 23ರ ವರೆಗೆ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ, ಪಂಚಾಮೃತ, ಅಭಿಷೇಕ, ಅಲಂಕಾರ, ಮಹಾನೈವೇದ್ಯ, ಬ್ರಾಹ್ಮಣರ ಸಮಾರಾಧನೆ, ಹಸ್ತೋದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾದಿಗಳು ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಮಠದ ಅರ್ಚಕ ಬಲರಾಮಾಚಾರ್ಯ ಪ್ರಕಟಣೆ ಮೂಲಕ ಕೋರಿದ್ದಾರೆ.
ಪಿಂಜಾರ ಸಂಘಕ್ಕೆ ಆಯ್ಕೆ
ಹಗರಿಬೊಮ್ಮನಹಳ್ಳಿ: ರಾಜ್ಯ ಪಿಂಜಾರ ನದಾಫ್ ಸಂಘದ ಸಭೆಯಲ್ಲಿ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ. ಹಸನ್ಸಾಬ್ ಅಧ್ಯಕ್ಷರಾಗಿ, ಅಬ್ದುಲ್ ಖಾದರ್ಸಾಬ್ ಉಪಾಧ್ಯಕ್ಷ, ಎಂ. ಹೊನ್ನೂರುಸಾಬ್ ಕಾರ್ಯದರ್ಶಿ, ಚಾಂದ್ಬಾಷಾ ಸಹಕಾರ್ಯದರ್ಶಿ, ದಾವುದ್ಸಾಬ್ ಖಜಾಂಚಿ, ಪಿ. ಚಾಂದಬೀ ಮಹಿಳಾ ಸದಸ್ಯೆ, ಬಿ.ಎ. ಅಬ್ದುಲ್, ಏಣಿಗಿ ಕರೀಂಸಾಬ್, ಇಮಾಮ್ಸಾಬ್, ಬನ್ನಿಗೋಳ ಪಿ. ಲಾಡ್ಸಾಬ್, ಲೋಹಿತ್ಸಾಬ್ ಜಿಲ್ಲಾ ಪ್ರತಿನಿಧಿಗಳು ಹಾಗೂ ಪಿ. ಗುಲ್ಜಾರ್ ಅಹಮದ್, ಬಿ. ಅಲ್ಲಾಭಕ್ಷಿ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
--