ಬಳ್ಳಾರಿ: ವಿದ್ಯುನ್ಮಾನ ತಕ್ಕಡಿ ಅಳವಡಿಕೆಗೆ ಆಗ್ರಹ
ಬಳ್ಳಾರಿ: ನ್ಯಾಯಬೆಲೆ ಅಂಗಡಿಗಳಲ್ಲಿ ವಿದ್ಯುನ್ಮಾನ ತಕ್ಕಡಿಗಳನ್ನು ಅಳವಡಿಸುವಂತೆ ಆದೇಶಿಸಲು ಬಳ್ಳಾರಿ ಯುವಸೇನೆ ಅಧ್ಯಕ್ಷ ಮೇಕಲ ಈಶ್ವರ ರೆಡ್ಡಿ ಅವರು, ಬಳ್ಳಾರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಮನವಿಪತ್ರ ಸಲ್ಲಿಸಿದರು.
ನಗರದಲ್ಲಿನ ಹಲವು ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ ನಮಗೆ ತೂಕದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಇದು ಪಡಿತರ ಧಾನ್ಯ ವಿತರಣೆಯಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ. ಈ ಹಿಂದಿನ ಪದ್ಧತಿಯಂತೆಯೆ ಹಳೆಯ ಕಲ್ಲಿನ ತಕ್ಕಡಿಗಳನ್ನು ಇಂದಿಗೂ ಬಳಕೆ ಮಾಡುತ್ತಿರುವುದೆ ಇದಕ್ಕೆ ಕಾರಣವಾಗಿದೆ. ಪರಿಣಾಮ ಗ್ರಾಹಕರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ವಿದ್ಯುನ್ಮಾನ ತಕ್ಕಡಿ ಅಳವಡಿಸಿದಲ್ಲಿ ತಕ್ಕಮಟ್ಟಿಗೆ ಸುಧಾರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಿದ್ಯುನ್ಮಾನ ತಕ್ಕಡಿಗಳನ್ನು ಅಳವಡಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇಲಾಖೆಯ ಕಚೇರಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಯುವಸೇನೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.