ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯೋಜನೆ ದುರ್ಬಳಕೆಗೆ ಅಧಿಕಾರಿ ಸಾಥ್

Lingaraj Badiger
Updated On : 19 Aug 2013, 11:46 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 18
ಗಂಗಾ- ಕಲ್ಯಾಣ ಯೋಜನೆಯನ್ನು ಫಲಾನುಭವಿ ರೈತರು ದುರುಪಯೋಗ ಪಡಿಸಿಕೊಳ್ಳಲು ಜೆಸ್ಕಾಂ ಅಧಿಕಾರಿಗಳು ಸಹಕರಿಸುತ್ತಿರುವುದು ಕೂಡ್ಲಿಗಿ ತಾಲೂಕಿನಲ್ಲಿ ವ್ಯಾಪಕವಾಗಿ ನಡೆದಿದೆ. ಈ ಸಂಬಂಧ ತನಿಖೆ ಕೈಗೊಳ್ಳಬೇಕೆಂದು ಜಿಲ್ಲಾ ರೈತ ಸಂಘಧ ಉಪಾಧ್ಯಕ್ಷ ಎನ್. ಭರಮಣ್ಣ ಒತ್ತಾಯಿಸಿದರು.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾ- ಕಲ್ಯಾಣ ಯೋಜನೆಯ ಲಾಭ ನಿಜವಾದ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬ ಕಾರಣಕ್ಕಾಗಿ ಕೂಡ್ಲಿಗಿ ತಾಲೂಕು ಅಧಿಕಾರಿ ಬೇಕಾಬಿಟ್ಟಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದ್ದಾರೆ. ಕೊಟ್ಟೂರು ಸಮೀಪದ ದೂಪದಹಳ್ಳಿ ತಾಂಡದಲ್ಲಿನ ಹರಿಶ್ಟಂದ್ರ ನಾಯ್ಕ ಎಂಬಾತ ಯೋಜನೆಯನ್ನು ಅಧಿಕಾರಿಗಳಿಂದ ಮಂಜೂರು ಮಾಡಿಸಿಕೊಂಡನಾದರೂ ಯಾವುದೇ ಬಗೆಯ ಕೊಳವೆಬಾವಿಯನ್ನು ತಮ್ಮ ಹೊಲದಲ್ಲಿ ಕೊರೆಯಿಸಿದ ಸುಳಿವೇ ಇಲ್ಲ. ಹೊಲದಲ್ಲಿ ಈ ಸಂಬಂಧ ಪರಿಶೀಲನೆ ನಡೆಸಿದರೆ ಬೋರ್ ಕೊರೆಯಿಸಿದಂತೆ ಮಣ್ಣನ್ನು ಅಗೆದು ಗುಂಪಾಗಿರಿಸಿದ್ದಾನೆ. ಬೋರ್ ಕೊರೆಯಿಸದೆ ಇದ್ದರೂ ಈ ರೈತನಿಗೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೆ ಎಲ್ಲ ಸಿದ್ಧತೆ ಕೈಗೊಂಡಿದ್ದಾರೆ. ಇದೊಂದು ಅಕ್ರಮ ಎಂದು ಆರೋಪಿಸಿದರು.
ಹಣ ದುರುಪಯೋಗ: ಯೋಜನೆಯ ಫಲಾನುಭವಿ ಬೋರ್ ಕೊರೆಯಿಸಿ ವಿದ್ಯುತ್ ಸಂಪರ್ಕಕ್ಕೆ ಎಷ್ಟೇ ಬಾರಿ ಅಲೆದಾಡಿದರೂ ಸಂಪರ್ಕ ಕಲ್ಪಿಸಿಕೊಡಲು ಹೆಣಗಾಡಿಸುವ ಜೆಸ್ಕಾಂ ಅಧಿಕಾರಿಗಳು, ಹರಿಶ್ಟಂದ್ರ ನಾಯ್ಕನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ಆರು ವಿದ್ಯುತ್ ಕಂಬಗಳನ್ನು ಮತ್ತು 1 ಟಿ.ಸಿ.ಯನ್ನು ಅಳವಡಿಸಿದ್ದಾರೆ. ಇದನ್ನೇ ತೋರಿಸಿ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಳ್ಳಲು ನಾಯ್ಕನಿಗೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ದೂರಿದರು.
ಈ ಸಂಬಂಧ ಈಗಾಗಲೇ ಕೂಡ್ಲಿಗಿ ಜೆಸ್ಕಾಂನ ಎಇಇ ಉಮಾಶಂಕರ್‌ಗೆ ದೂರು ಸಲ್ಲಿಸಿದಾಗ ಅವರು ಸ್ಥಳಕ್ಕೆ ಆ. 16ರಂದು ಭೇಟಿ ನೀಡಿ ಪರಿಶೀಲಿಸಿ ಅಕ್ರಮ ನಡೆದಿರುವುದು ಪತ್ತೆ ಹಚ್ಚಿದ್ದಾರೆ. ಎಇಇ ಅವರು ಪರಿಶೀಲನೆ ಕೈಗೊಂಡ ವಿಷಯ ತಿಳಿದ ರೈತ ಹರಿಶ್ಟಂದ್ರನಾಯ್ಕ ಮತ್ತವರು ಬೆಂಬಲಿಗರು ಮರುದಿನ ರಾತ್ರಿ ತಮ್ಮ ಹೊಲದಲ್ಲಿ ಬೋರ್ ಹಾಕಿಸಿ ಅಕ್ರಮವನ್ನು ಮುಚ್ಚುವ ಪ್ರಯತ್ನ ನಡೆಸಿದರು.
ಇದರ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರ ಬೀಳಬೇಕಿದೆ. ಈ ಕಾರಣಕ್ಕಾಗಿಯೇ ಹಿರಿಯ ಅಧಿಕಾರಿಗಳು ತ್ವರಿತ ತನಿಖೆಗೆ ಮುಂದಾಗಬೇಕು ಎಂದು ಭರಮಣ್ಣ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement