ಸಂಸ್ಕೃತಿ ಪರಂಪರೆ ರಾಷ್ಟ್ರದ ಹೆಗ್ಗುರುತು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 18
ಸಂಸ್ಕೃತಿಯ ತಳಹದಿ ಮೇಲೆ ಪ್ರತಿ ರಾಷ್ಟ್ರ ನಿರ್ಮಾಣಗೊಳ್ಳಬೇಕು. ಆಗ ಮಾತ್ರ ರಾಷ್ಟ್ರ ಎಲ್ಲ ರಂಗಗಳಲ್ಲಿ ಅಭ್ಯುದಯ ಕಾಣುತ್ತದೆ. ಈ ಕಾರಣಕ್ಕಾಗಿಯೇ ಭಾರತ ಉಳಿದೆಲ್ಲ ರಾಷ್ಟ್ರಗಳ ಬಾಯಲ್ಲಿ ಸದಾ ನೆಲೆಯೂರುತ್ತದೆ. ಸಂಸ್ಕೃತಿ ಪರಂಪರೆ ರಾಷ್ಟ್ರದ ಹೆಗ್ಗುರುತು ಎಂದು ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದರು.
ಸಮೀಪದ ಉಜ್ಜಿನಿ ಸದ್ಧರ್ಮಪೀಠದಲ್ಲಿ ಕಳೆದ ರಾತ್ರಿ ಶ್ರಾವಣ ಮಾಸದ ಪ್ರಯುಕ್ತ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ದಾನಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ನೆಲೆಯಲ್ಲಿ ಎಲ್ಲ ಬಗೆಯ ಸಂಪತ್ತನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಉಜ್ಜಿನಿ ಸದ್ಧರ್ಮಪೀಠ ಸದಾ ಜನತೆಯ ಒಳಿತಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.
ಶ್ರೀ ಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ ಆಶೀರ್ವದಿಸಿ, ಮಹಿಳೆ ಸಹಿಷ್ಣುತೆಯ ಸಂಕೇತ. ಯಾವುದೇ ಬಗೆಯ ಒತ್ತಡವಿದ್ದರೂ ಸದಾ ತನ್ನ ಮನೆ ಸಮಾಜಕ್ಕೆ ಒಳಿತನ್ನು ಮಾಡುವ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಇಂತಹ ಉದಾತ್ತ ಮನೋಭಾವ ಹೊಂದಿರುವ ಸ್ತ್ರೀ ಬಗ್ಗೆ ಸದಾ ಪ್ರತಿಯೊಬ್ಬರೂ ಗೌರವ ತೋರಿಸಬೇಕು ಎಂದರು.
ಶ್ರಾವಣ ಮಾಸದ ಈ ಪವಿತ್ರ ತಿಂಗಳಲ್ಲಿ ಹಲವು ಬಗೆಯ ಪೂಜಾ ಹೋಮ ಹವನಾದಿಗಳನ್ನು ನಡೆಸುವ ಮೂಲಕ ನಾಡಿಗೆ ಸದಾ ಸುಖ-ಶಾಂತಿ-ನೆಮ್ಮದಿ ಬಯಸುವ ಪ್ರಕ್ರಿಯೆ ಅಲ್ಲಲ್ಲಿ ನಡೆದಿದೆ. ಇತ್ತೀಚೆಗೆ ಕೇದಾರನಾಥ ಲಕ್ಷ್ಮೀ ದೇವಾಲಯ ಸ್ಥಳಾಂತರಗೊಳಿಸಿದ ಪ್ರಕ್ರಿಯೆಯಿಂದಾಗಿ ಅನಾಹುತ ಉಂಟಾಯಿತು ಎಂಬ ಅನಿಸಿಕೆ ಎಲ್ಲ ಭಕ್ತರಲ್ಲಿ ಮನೆಮಾಡಿದೆ. ಈ ಕಾರಣಕ್ಕಾಗಿಯೇ ಈ ಬಾರಿ ವಿಶೇಷ ಪೂಜೆಗಳು ಅಲ್ಲಲ್ಲಿ ನಡೆಯುತ್ತಿವೆ. ಇದೊಂದು ನಂಬಿಕೆಯಾದರೂ ಎಂದೂ ಸುಳ್ಳಾಗುವುದಿಲ್ಲ. ಯಾವುದೇ ಕೆಲಸ ಮಾಡಿದರೆ ಅದರಲ್ಲೂ ಪೂಜಾ ಕೈಂಕರ್ಯದಲ್ಲಿ ವಿಶ್ವಾಸ ಹೊಂದಿರಬೇಕು. ಆಗ ಮಾತ್ರ ಎಲ್ಲ ಬಗೆಯ ನೆಮ್ಮದಿ ಕಾಣಬಹುದಾಗಿದೆ ಎಂದರು.
ಗೀತಾ ಹರ್ಷವರ್ಧನ್, ವಸುದಾ, ಎಂ.ಜಿ. ರುದ್ರಯ್ಯ, ಆರ್.ಎಂ. ಬಸವರಾಜ್, ವ್ಯವಸ್ಥಾಪಕ ಲಿಂಗಶೆಟ್ಟಿ ಪಾಲ್ಗೊಂಡಿದ್ದರು.
--
ಅನಧಿಕೃತ ಪಡಿತರ ಧಾನ್ಯ ಸಾಗಾಟ: ವಶ
ಬಳ್ಳಾರಿ: ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳೂರು ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿ, ಲಾರಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ಪಡಿತರ ಧಾನ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶನಿವಾರ ಸಂಜೆ ತಾಳೂರು ಗ್ರಾಮದಲ್ಲಿ ಅನಧಿಕೃತವಾಗಿ ಪಡಿತರ ಧಾನ್ಯಗಳ ಅಕ್ಕಿ ಮತ್ತು ಗೋದಿಯನ್ನು ಚೀಲಗಳಲ್ಲಿ ತುಂಬಿ ಲಾರಿಯಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಕಾರ್ಯೋನ್ಮುಖರಾಗಿ, ಗ್ರಾಮಸ್ಥರ ನೆರವಿನಿಂದ ರು. 84,000 ಮೌಲ್ಯದ 160 ಚೀಲ ಅಕ್ಕಿ ಮತ್ತು 10 ಚೀಲ ಗೋದಿ ವಶಪಡಿಸಿಕೊಂಡಿದ್ದಾರೆ. ಲಾರಿಯಲ್ಲಿದ್ದ ಆರೋಪಿ ಅಲ್ಲಾಭಕ್ಷಿ ಎಂಬವನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಚಾಲಕ ಪಾಷಾ ಪರಾರಿಯಾಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.