ಸಚಿವರೇ, ಏನಾಯ್ತು ಇಲಾಖೆ ತನಿಖೆ?
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 18
ದಕ್ಷ, ಪ್ರಾಮಾಣಿಕ, ನೊಂದ ಜನತೆಯ ನೋವಿಗೆ ಸ್ಪಂದಿಸುವ, ಪಾರದರ್ಶಕ ಆಡಳಿತಕ್ಕಾಗಿ ಎಂ.ಪಿ. ಪ್ರಕಾಶ ಅವರ ಉತ್ತರಾಧಿಕಾರಿ ನಾನು....
ಹೀಗೆಂದು ಕಾರ್ಮಿಕ ಸಚಿವ ಸ್ಥಾನ ಅಲಂಕರಿಸಿದ ಆರಂಭದಲ್ಲೇ ಅಬ್ಬರಿಸುವ ಮೂಲಕ ಅಧಿಕಾರಿ ವಲಯಕ್ಕೆ ಎಚ್ಚರಿಕೆ ನೀಡಿದ್ದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ. ಆದರೆ ಕಠಿಣ ಕ್ರಮ ಮಾತ್ರ ಶೂನ್ಯ.
ಹೌದು, ವಿರೋಧ ಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದ ವಿರುದ್ಧ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಕೆಲ ಇಲಾಖೆಗಳಲ್ಲಿ ನಡೆದ ಅವ್ಯವಹಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಮತದಾರರಲ್ಲಿ ಹೊಸ ಭರವಸೆ ಮೂಡಿಸಿ, ಇಂದು ಸಚಿವರಾಗಿರುವ ಪರಮೇಶ್ವರ ನಾಯ್ಕ ಅಧಿಕಾರ ಬಂದ ಕೂಡಲೇ ಕೆಲ ಇಲಾಖೆಗಳ ತನಿಖೆ ಕುರಿತು ನೀಡಿರುವ ಬೊಗಸೆ ತುಂಬಾ ಭರವಸೆಯನ್ನು ಮರೆತು ಬಿಟ್ಟಿದ್ದಾರೆ.
ಸಣ್ಣ ನೀರಾವರಿ ಇಲಾಖೆ: ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಹರಿದು ಬಂದ ಅನುದಾನದಲ್ಲಿ ಕೆರೆ ಹೂಳು ಎತ್ತುವುದು, ತೂಪು ನಿರ್ಮಾಣ, ಕಾಲುವೆ ಕಾಮಗಾರಿಗಳಾಗಿ ಬಂದ ಅನುದಾನದಲ್ಲಿ ಸಮರ್ಪಕವಾಗಿ ಕಾಮಗಾರಿ ನಡೆದಿಲ್ಲ. ಅಂದಿನ ಆಡಳಿತ ಸರ್ಕಾರದ ಪರ ಅಧಿಕಾರಿಗಳು ಕೆಲಸ ಮಾಡಿ ಬೋಗಸ್ ಬಿಲ್ಗಳನ್ನು ಮಾಡಿದ್ದಾರೆಂದು ಇದೆ ಸಚಿವರು ಈ ಹಿಂದೆ ಬಹಿರಂಗವಾಗಿ ಪ್ರತಿಭಟನೆಯಲ್ಲಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ ಪಿ.ಟಿ. ಪರಮೇಶ್ವರ ನಾಯ್ಕ ಸಚಿವರಾಗಿ 3 ತಿಂಗಳು ಕಳೆಯುತ್ತಾ ಬಂದಿವೆ. ಅಧಿಕಾರಿಗಳ ಸಭೆಯಲ್ಲಿಯೂ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ವರೆಗೂ ಸಚಿವರು ಈ ಕುರಿತು ತುಟಿ ಬಿಚ್ಚಿಲ್ಲ. ಈ ಕುರಿತು ಮಾಧ್ಯಮದವರು ಅನೇಕ ಬಾರಿ ಗಮನ ಸೆಳೆದರೂ 'ಕ್ರಮ ತೆಗೆದುಕೊಳ್ಳುತ್ತೇನೆ ತಡೀರಪ್ಪಾ....' ಅಂತಾರೆ.
ತಾಲೂಕಿನ ಹಿರೇಹಡಗಲಿ ಕೆರೆ ಅಭಿವೃದ್ಧಿಗಾಗಿ ರು. 68 ಲಕ್ಷ ಕಾಮಗಾರಿ ಮಾಡಲಾಗಿತ್ತು. ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಶಾಂತಯ್ಯ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಆಗ ತಾಪಂ ಇಒ ತಂಡ ರಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಯಾವ ಕ್ರಮವಿಲ್ಲ.
ಕೆರೆ ಕಾಮಗಾರಿ ಕಳಪೆಯಾಗಿದೆ, ಆದಷ್ಟು ಶೀಘ್ರದಲ್ಲೇ ತನಿಖೆ ಮಾಡುವ ಭರವಸೆಯನ್ನು ಸ್ವತಃ ಸಚಿವರೆ ನೀಡಿದ್ದು, ಇನ್ನು ಈಡೇರಿಲ್ಲ. ಸಚಿವರು ಇತ್ತ ಗಮನ ಹರಿಸಿ ಬೇಗ ತನಿಖೆ ಮಾಡಿ ಗುತ್ತಿಗೆದಾರರ ವಿರುದ್ಧ ಹಾಗೂ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯ ಶಾಂತಯ್ಯ ಮನವಿ ಮಾಡಿದ್ದಾರೆ.
ಲೋಕೋಪಯೋಗಿ ಇಲಾಖೆ: 5 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿಗೆ ಬಂದಿರುವ ಅನುದಾನ ಸರಿಯಾಗಿ ಸದುಪಯೋಗ ಆಗಿಲ್ಲ, ಸಾಕಷ್ಟು ಕಡೆಗಳಲ್ಲಿ ಬೋಗಸ್ ಬಿಲ್ಗಳಾಗಿ ಬಂದ ಅನುದಾನವೆಲ್ಲ ಲೂಟಿಯಾಗಿದೆ ಎಂದು ಆರೋಪ ಮಾಡುತ್ತಿದ್ದ ಸಚಿವರೆ ಈಗ ಈ ಕುರಿತು ಯಾವೊಂದು ಹೇಳಿಕೆ ನೀಡುತ್ತಿಲ್ಲ. ತನಿಖೆಗೆ ಈ ವರೆಗೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸಚಿವರ ಇಂತಹ ಭರವಸೆಗಳು ಪ್ರಚಾರಕ್ಕಾಗಿ ಸೀಮಿತವಾಗಿವೆಯೇ ಅಥವಾ ಅಧಿಕಾರಿ ವಲಯದಲ್ಲಿ ನಡುಕ ಹುಟ್ಟಿಸುವ ಮಾತುಗಳೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ತಾಲೂಕು ಪಂಚಾಯಿತಿ ಮಲ್ಲಿಗೆ ಸಭಾಂಗಣದಲ್ಲಿ ನಡೆದ ಮೊದಲ ಅಧಿಕಾರಿಗಳ ಸಭೆಯಲ್ಲಿ ಸಚಿವರ ಆದೇಶಗಳು ಇಂದಿಗೂ ಜಾರಿಯಾಗಿಲ್ಲ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಗ್ರಾಮೀಣ ರಸ್ತೆಗಳಿಗೆ ಮೊದಲು ತಗ್ಗು ಗುಂಡಿಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಈ ವರೆಗೂ ಯಾವ ದಾರಿಗೂ ಬೊಗಸೆ ಮಣ್ಣು ಹಾಕುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದೇ ಅವ್ಯವಸ್ಥೆ ಇರುವ ರಸ್ತೆಯಲ್ಲೆ ಸಂಚಾರ ಮಾಡಬೇಕಾದ ಗತಿ ಬಂದಿದೆ ಎಂದು ಜನತೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿದ್ದ ಪಿ.ಟಿ. ಪರಮೇಶ್ವರ ನಾಯ್ಕ ಅಂದೇ ಗ್ರಾಮೀಣ ರಸ್ತೆಗಳ ನರಕ ಯಾತನೆ ದೃಶ್ಯ ಕಣ್ಣಾರೆ ಕಂಡು, ಸಭೆಯಲ್ಲಿ ರಸ್ತೆಯನ್ನು ರೈತರು ಪೈಪ್ಲೈನ್ ಮಾಡಲು ಕಿತ್ತು ಹಾಕಿದ್ದಾರೆ. ಅಂತಹ ರೈತರಿಗೆ ಎಚ್ಚರಿಕೆ ನೀಡಿ, ರಸ್ತೆ ದುರಸ್ತಿ ಮಾಡಿ ಎಂದು ಎಚ್ಚರಿಕೆ ನೀಡಿದ್ದು ಕೇವಲ ಅರವಿಯಲ್ಲಿ ಬಿಟ್ಟ ಹಾವಿನಂತಾಗಿದೆ. ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
-ಚಂದ್ರು ಕೊಂಚಿಗೇರಿ