ಕಡಿಮೆ ನೀರಿಗೆ ಬೆಳೆಯುವ ಬೆಳೆ ಬೆಳೆಯಿರಿ: ಕೆ.ಎಸ್. ಭರತ್
ಬಳ್ಳಾರಿ: ರಾಜ್ಯಾದ್ಯಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ, ಆದರೆ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ ರೈತರು ಕಡಿಮೆ ನೀರಿಗೆ ಬೆಳೆಯುವ ಬೆಳೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಧನುಕಾ ಅಗ್ರಿಟೆಕ್ ಲಿಮಿಟೆಡ್ನ ಹಿರಿಯ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಭರತ್ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ಡೀಲರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಯಾವ ರೀತಿ ಸುಧಾರಿಸಬೇಕೆಂಬುದನ್ನು ರೈತರಲ್ಲಿ ಅರಿವು ಮೂಡಿಸಲು ಸಂಸ್ಥೆಯು ಈಗಾಗಲೇ ಹಲವು ರೀತಿಯಲ್ಲಿ ಕ್ರಮ ಕೈಗೊಂಡಿದ್ದು, ಬಾಲಿವುಡ್ ಖ್ಯಾತನಟ ಅಮಿತಾಬ್ ಬಚ್ಚನ್ರನ್ನು ಪ್ರಚಾರಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ರೈತರು ಸಹ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಬೆಳೆಯುವ ಬೆಳೆಯನ್ನು ಬೆಳೆಸಲು ಮುಂದಾಗುವುದಲ್ಲದೆ, ಅವು ಯಾವ ಬೆಳೆ, ಹೇಗೆ ಬೆಳೆಸಬೇಕೆಂಬುದನ್ನು ಅರಿತುಕೊಳ್ಳಬೇಕು ಎಂದರು.
ವ್ಯವಸ್ಥಾಪಕ ದಾಮೋದರ್ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ವ್ಯವಸ್ಥಾಪಕ ಎರ್ರಿಸ್ವಾಮಿ, ಡಾ. ಯಂಜೇರಪ್ಪ, ಡಾ. ಅನಂತಕುಮಾರ್, ಪ್ರಾದೇಶಿಕ ವ್ಯವಸ್ಥಾಪಕ ಶೇಖ್ ಹುಸೇನ್ ಸೇರಿದಂತೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಡೀಲರ್ಗಳು ಇದ್ದರು.