ಕಾಂಗ್ರೆಸ್ ಸಹಕಾರವಿಲ್ಲದೆ ಕ್ಷೇತ್ರಕ್ಕೆ ನೆರವಿಲ್ಲ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 19
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ಶಾಸಕರು ಪ್ರತಿನಿಧಿಸುತ್ತಿರುವ ಕಾರಣಕ್ಕಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಹೆಚ್ಚಿನ ನೆರವು ಕ್ಷೇತ್ರಕ್ಕೆ ನಿರೀಕ್ಷಿಸುವುದು ಕಷ್ಟಕರ. ಇದನ್ನು ಮೀರಿ ಶಾಸಕರು ಸರ್ಕಾರದ ಮೇಲೆ ಒತ್ತಡ ತರಲು ತಮ್ಮ ಸಹಕಾರ ಬಯಸಿದರೆ ತಾವು ನೀಡಲು ಸದಾ ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಎಲ್. ಮಾರೆಣ್ಣ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಸಹಕಾರವಿಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದರು.
ಇದು ಕೇವಲ ತಮ್ಮೊಬ್ಬರ ಅಭಿಪ್ರಾಯ ಅಲ್ಲ. ಎಲ್ಲ ರಾಜಕಾರಣಿಗಳು ಮತ್ತು ಸಾಮಾನ್ಯ ಜನರ ನಿರೀಕ್ಷೆ ಕೂಡ ಎಂದ ಅವರು, ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ಹಂತದಲ್ಲಿ ಪಕ್ಷದ ಹಿಡಿತ ಕ್ಷೇತ್ರದ ಮಟ್ಟಿಗೆ ಕೈ ತಪ್ಪದಂತೆ ಗಮನ ಹರಿಸುವಂತೆ ಹಿರಿಯ ನಾಯಕರು ತಮಗೆ ಸೂಚಿಸಿದ್ದಾರೆ. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಸರ್ಕಾರದಿಂದ ಮಂಜೂರಾಗುವ ವಿವಿಧ ಯೋಜನೆ ಮತ್ತು ಅನುದಾನ ಜಾರಿ ಕುರಿತು ತಮಗೆ ಸದಾ ಮಾಹಿತಿ ನೀಡುವಂತೆ ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿರುವೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ದುರುಪಯೋಗ: ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ತಮ್ಮ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಕೈಗೆತ್ತಿಕೊಂಡ ಬಸವ ವಸತಿ ಯೋಜನೆಯ ಅನುದಾನ ಭಾರಿ ಪ್ರಮಾಣದಲ್ಲಿ ದುರ್ಬಳಕೆಯಾಗಿರುವ ಬಗ್ಗೆ ಜನತೆ ಸದಾ ದೂರುತ್ತಿದ್ದಾರೆ. ಮನೆ ನಿರ್ಮಾಣದ ನಿರ್ವಹಣೆ ಹೊತ್ತ ಭೂಸೇನಾ ನಿಗಮದ ಅಧಿಕಾರಿಗಳ ಸಂಪೂರ್ಣ ಸಹಕಾರ ಶಾಸಕರಿಗೆ ದೊರಕಿದ್ದ ಕಾರಣಕ್ಕಾಗಿ ಅನುದಾನ ಬಹಳಷ್ಟು ಪ್ರಮಾಣದಲ್ಲಿ ದುರುಪಯೋಗವಾಗಿದೆ. ಈ ಎಲ್ಲದರ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳುವಂತೆ ಸರ್ಕಾರದ ಮೇಲೆ ತಾವು ಒತ್ತಡ ಹೇರಲು ತೊಡಗಿಸಿಕೊಳ್ಳುವೆ ಎಂದರು.
ಒತ್ತಾಯ: ಕೊಟ್ಟೂರು- ಹರಿಹರ ರೈಲು ಮಾರ್ಗದ ಆರಂಭಕ್ಕೆ ದೊಡ್ಡ ಅಡ್ಡಿಯಾಗಿರುವ ಹರಿಹರ ತಾಲೂಕು ರೈತರನ್ನು ಸಚಿವ ಶ್ಯಾಮನೂರು ಶಿವಶಂಕ್ರಪ್ಪ ಮನವೊಲಿಸಿದ್ದು, ಓಡಾಟಕ್ಕೆ ರೈತರು ತಂದಿರುವ ತಡೆಯನ್ನು ಹಿಂತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತರ ಸಮಸ್ಯೆ ಶೀಘ್ರ ಬಗೆಹರಿಯಲಿದ್ದು, ಇಷ್ಟರಲ್ಲೇ ರೈಲು ಸಂಚಾರ ಪ್ರಾರಂಭಿಸುವಂತೆ ಸಚಿವ ಶಿವಶಂಕ್ರಪ್ಪ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ನಿವೇದಿಸಿದ್ದಾರೆ. ಈ ಕಾರಣದಿಂದ ರೈಲು ಸಂಚಾರ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಲ್ವಿ ಜಲಾಶಯಕ್ಕೆ ನೀರು ತುಂಬಿಸುವ ಬೃಹತ್ ಯೋಜನೆಗೆ ಚಾಲನೆ ದೊರಕಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ತಾವು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಗಮನ ಸೆಳೆದಿರುವೆ. ಕೊಟ್ಟೂರು ತಾಲೂಕು ರಚನೆ ಪ್ರಕ್ರಿಯೆಗೂ ಒತ್ತಾಸೆಯಾಗಿ ನಿಲ್ಲುವಂತೆ ಸಚಿವರನ್ನು ಒತ್ತಾಯಿಸಿರುವೆ ಎಂದರು. ಪಕ್ಷದ ಮುಖಂಡರಾದ ಎಂ.ಎಂ.ಜೆ. ಸತ್ಯಪ್ರಕಾಶ್, ಹಿರೇಕುಂಬಳಗುಂಟೆ ಉಮೇಶ್, ಅಡಕೆ ಮಂಜುನಾಥ, ಎಂ.ಎಂ.ಜೆ. ವಾಗೀಶ, ಪಿ.ಜಿ. ಪಾಟೀಲ್, ಮೇದಾರ ಬಸವರಾಜ ಇದ್ದರು.