ಶಾಲಾ ಮಕ್ಕಳಿಗೆ ಫ್ಲೋರೈಡ್ ನೀರೇ ಗತಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 19
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ನಾನಾ ಯೋಜನೆಗಳನ್ನು ಜಾರಿಗೆ ತಂದರೂ ಶುದ್ಧ ಕುಡಿವ ನೀರಿನ ಭಾಗ್ಯ ಮಾತ್ರ ಇನ್ನು ಸಿಕ್ಕಿಲ್ಲ. ಅದೇ ಫ್ಲೋರೈಡ್ಯುಕ್ತ ನೀರೇ ಈ ಮಕ್ಕಳಿಗೆ ಗತಿಯಾಗಿದೆ.
ಹೌದು, ಸರ್ವ ಶಿಕ್ಷಣ ಅಭಿಯಾನದಂತಹ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಶುದ್ಧ ಕುಡಿಯುವ ನೀರಿನ ಯೋಜನೆಯಾಗಿರುವ ಜಲಮಣಿ ಯೋಜನೆ ಈಗ ಮೂಲೆಗೆ ಸೇರಿದೆ.
ಹೂವಿನಹಡಗಲಿ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ನಡುವೆ ಮಕ್ಕಳ ವಿದ್ಯಾಭ್ಯಾಸ ನಡೆದಿದೆ. ಅಗತ್ಯ ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳದೆ ಕಳಪೆ ಕಾಮಗಾರಿ, ಇನ್ನು ಕೆಲವಡೆಗಳಲ್ಲಿ ಕಾಮಗಾರಿಗಳಿಲ್ಲದೆ ಅನುದಾನ ದುರ್ಬಳಕೆಯಿಂದ ಮಕ್ಕಳಿಗೆ ಅದೇ ಫ್ಲೋರೈಡ್ಯುಕ್ತ ನೀರೆ ಗತಿ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ತಾಲೂಕಿನಲ್ಲಿ 183 ಹಿರಿಯ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿವೆ, 47 ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿವೆ. ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೊಸಿದ್ದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಫ್ಲೋರೈಡ್ಮುಕ್ತ ಶುದ್ಧ ಕುಡಿವ ನೀರು ಒದಗಿಸಲು ಜಲಮಣಿ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಲ್ಲಿ ತಾಲೂಕಿನ 22 ಶಾಲೆಗಳಲ್ಲಿ ಈ ಯೋಜನೆಯನ್ನು ಪಂಚಾಯತ್ ರಾಜ್ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗಿತ್ತು.
ಕೇವಲ ಬಿಲ್ ಪಡೆದರು: ಆದರೆ ಜಲಮಣಿ ಯೋಜನೆಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾಗಿ ಪರಿಕರಗಳನ್ನು ಜೋಡಣೆ ಮಾಡದೆ ಬಿಲ್ ಪಡೆದುಕೊಂಡಿದ್ದಾರೆ. ವಾಟರ್ ಫಿಲ್ಟರ್ನ್ನು ಮಾತ್ರ ಗೋಡೆಗೆ ಜೋಡಿಸಿದ್ದಾರೆ. ಕೆಲ ಕಡೆಗಳಲ್ಲಿ ಪೈಪ್ಲೈನ್ ಮಾಡಿದ್ದರೂ ಅದಕ್ಕೆ ಸಿಂಟ್ಯಾಕ್ಸ್ ಇದ್ದರೂ ಶಾಲೆ ಮೂಲೆ ಸೇರಿದೆ. ಇವುಗಳನ್ನೇ ಫೋಟೋ ತೆಗೆದುಕೊಂಡು ಎಸ್ಡಿಎಂಸಿಯಿಂದ ಅನುಮತಿ ಪಡೆದು ಬಿಲ್ ಮಾಡಿಕೊಂಡಿರುವ ಘಟನೆ ತಾಲೂಕಿನ 22 ಶಾಲೆಗಳಲ್ಲಿ ನಡೆದಿರುವುದರಿಂದ ಮಕ್ಕಳು ಫ್ಲೋರೈಡ್ಯುಕ್ತ ನೀರು ಕುಡಿವ ಪರಿಸ್ಥಿತಿ ಇದೆ.
ಫ್ಲೋರೈಡ್ಯುಕ್ತ ನೀರಿನ ಸೇವನೆಯಿಂದ ಮಕ್ಕಳ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹಲ್ಲುಗಳು ಕರಿ ಕಟ್ಟುತ್ತವೆ, ಮಕ್ಕಳ ಬೆಳವಣಿಗೆ ಸಮಯದಲ್ಲಿ ಕೀಲುನೋವು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರ ಲಕ್ಷಾಂತರ ರು.ಗಳನ್ನು ಆಯಾ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರ ಹೆಸರಿಗೆ ನೀಡುತ್ತಿದೆ. ಆದರೆ ಅಧ್ಯಕ್ಷರು ಮತ್ತು ಸದಸ್ಯರು ಕಳಪೆ ಕಾಮಗಾರಿಗಳನ್ನು ಮಾಡಿದ್ದಾರೆಂಬ ಅನೇಕ ದೂರುಗಳು ಕೇಳಿ ಬಂದಿವೆ. ಗ್ರಾಪಂಗಳ ಮೂಲಕ ರಾಜೀವ ಗಾಂಧಿ ಕುಡಿವ ನೀರಿನ ಯೋಜನೆಯಲ್ಲಿ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿವ ನೀರಿನ ಸೌಲಭ್ಯವೇ ಇಲ್ಲ.
ಗಮನ ಹರಿಸುವರೆ ಇತ್ತ?: ಜಲಮಣಿ ಯೋಜನೆಯನ್ನು ತಾಲೂಕಿನ 22 ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲಾಗಿದೆ. ಆದರೆ ಅದರ ಅನುಷ್ಠಾನ ಮಾಡಲು ಪಂಚಾಯತ್ ರಾಜ್ ಇಲಾಖೆಗೆ ಒಪ್ಪಿಸಲಾಗಿತ್ತು. ಆಯಾ ಶಾಲೆಗಳ ಮೂಲ ಸೌಕರ್ಯಗಳ ಕುರಿತು ಈ ಹಿಂದೆ ಬಿಇಒ ಕಚೇರಿಯಲ್ಲಿ ಶಾಲೆಯ ಮುಖ್ಯಗುರುಗಳ ಸಭೆ ಕರೆದು ಮಾಹಿತಿ ಸಂಗ್ರಹಿಸಲಾಗಿತ್ತು. ಆದರೆ ಈ ವರೆಗೂ ಯಾವ ಕ್ರಮ ಜರುಗಿಸಿಲ್ಲ.
ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿವ ನೀರಿನ ಸೌಲಭ್ಯವಿಲ್ಲದ ಕಡೆಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕು.
ಚಂದ್ರು ಕೊಂಚಿಗೇರಿ