ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 20 Aug 2013, 11:22 am

ಇಂದು ಚಲನಚಿತ್ರೋತ್ಸವ
ಬಳ್ಳಾರಿ: ನಗರದ ರಾಜರಾಜೇಶ್ವರಿ ಚಿತ್ರಮಂದಿರದಲ್ಲಿ ಆ. 20ರಂದು ಬೆಳಗ್ಗೆ 10.30ಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಚಿತ್ರ ಸಂಸ್ಥೆಯಿಂದ ಆಯೋಜಿಸುವ ಚಿತ್ರೋತ್ಸವದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಗ್ರಾಮೀಣ ಶಾಸಕ ಬಿ. ಶ್ರೀರಾಮುಲು ಉದ್ಘಾಟಿಸುವರು, ನಗರ ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸಲಿದ್ದು,  ಕೆಎಂಎಫ್ ರಾಜ್ಯಾಧ್ಯಕ್ಷ ಸೋಮಶೇಖರ ರೆಡ್ಡಿ, ನಟರಾಜ್ ಚಿತ್ರಮಂದಿರದ ಮಾಲೀಕ ಲಕ್ಷ್ಮಿಕಾಂತ ರೆಡ್ಡಿ, ಹನುಮಂತರೆಡ್ಡಿ, ಉದ್ಯಮಿಗಳಾದ ಪಾರ್ವತಮ್ಮ, ಸಾಹುಕಾರ್ ಸತೀಶ್‌ಬಾಬು, ಸುರೇಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಎಚ್. ವೀರೇಶ್‌ಗೌಡ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ ಸೇರಿದಂತೆ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಕೆ. ಅಶೋಕ್ ಕಡಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಟ್ಕಾ ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಪಟ್ಟಣದ ಇಟಗಿ ರಸ್ತೆಯ ಅಜ್ಜಪ್ಪನ ಗ್ಯಾರೇಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಓರ್ವನ್ನು ಬಂಧಿಸಿದ್ದಾರೆ. ಬಂಧಿತನಿಂದ ರು. 11,352 ನಗದು, ಮಟ್ಕಾ ಪಟ್ಟಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ
ಬಳ್ಳಾರಿ: ನಗರದ ಸಂತ ಜಾನ್ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕಾಂಟೋನ್ಮೆಂಟ್ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪೌಲ್‌ಕುಮಾರ್ (15) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 7ಕ್ಕೆ ಮನೆಯಿಂದ ಆಚೆ ಹೋದ ಇವನು ನಗರದ ಹೊರವಲಯದಲ್ಲಿನ ಕಂಟೋನ್ಮೆಂಟ್ ಪ್ರದೇಶದ ಕೆನಾಲ್ ಬಳಿ ರೈಲು ಹಳಿಯ ಮೇಲೆ ಮಲಗಿ ಮೃತಪಟ್ಟಿದ್ದಾನೆ. ಈ ಕುರಿತು ರೈಲು ಚಾಲಕ ರಾತ್ರಿ 10.30ರ ಸುಮಾರಿಗೆ ರೇಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ದೇವರಾಜು ಅರಸು ಜನ್ಮದಿನಾಚರಣೆ
ಕೂಡ್ಲಿಗಿ: ತಾಲೂಕು ಆಡಳಿತ, ತಾಪಂ, ಪಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜನಪರ ಸಂಘಟನೆಗಳ ಸಂಯುಕ್ತಾಶ್ರಯಲ್ಲಿ ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಆ. 20ರಂದು ಬೆಳಗ್ಗೆ 9ಕ್ಕೆ ಹಿಂದುಳಿದ ವರ್ಗಗಳ ನೇತಾರ ದಿ. ದೇವರಾಜು ಆರಸು ಜನ್ಮದಿನಾಚರಣೆ ನಡೆಯಲಿದೆ ಎಂದು ತಾಲೂಕು ಬಿಸಿಎಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಬಿ. ನಾಗೇಂದ್ರ ಮೆರವಣಿಗೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಶಾಸಕ ಎಸ್. ಭೀಮಾನಾಯ್ಕ ಮತ್ತಿತರರು ಭಾಗವಹಿಸಲಿದ್ದಾರೆ.
ಬಂಡ್ರಿ ಕಾಲೇಜು ಪ್ರಾಚಾರ್ಯ ಡಾ. ಎಂ. ರಾಜಣ್ಣ ವಿಶೇಷ ಉಪನ್ಯಾಸ ನೀಡಲಿದ್ದಾರೆ.  ಮಾಜಿ ಶಾಸಕ ಕೆ.ವಿ. ರವೀಂದ್ರನಾಥಬಾಬು, ಕೆ. ಮಲ್ಲಣ್ಣ, ಎ.ಜಿ. ನಾಗಪ್ಪ, ಕುಂಬಾರ ಸಿದ್ದಪ್ಪ, ಎಂ. ಗನಿಸಾಬ್, ಬಿ. ಮರಿಯಪ್ಪ, ಮಡಕಲಕಟ್ಟೆ ಕೆ.ಎನ್. ಮಾರಪ್ಪ, ಎಂ. ಗಂಗಾಧರಪ್ಪ ಹಾಗೂ ಸಿದ್ಧಯ್ಯಸ್ವಾಮಿ ಇತರರನ್ನು ಸನ್ಮಾನಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು.
ಎಸ್‌ಡಿಸಿ ಅಮಾನತು
ಬಳ್ಳಾರಿ: ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ನಗರದ ಬಂಡಿಹಟ್ಟಿ ಪ್ರೌಢಶಾಲೆ ದ್ವಿತೀಯ ದರ್ಜೆ ಸಹಾಯಕ ಎಸ್.ವೈ.ದಶರಥಬಾಬು ಅವರನ್ನು ಡಿಡಿಪಿಐ ಟಿ. ನಾರಾಯಣಗೌಡ ಅಮಾನತುಗೊಳಿಸಿ ಆದೇಶ ಹೊರಡಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಒಂದು ವರ್ಷದಿಂದ ಅನುಮತಿ ಇಲ್ಲದೆ ಎರಡನೇ ಬಾರಿಗೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಈತನು, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಇದರಿಂದ ಶಾಲೆಯ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸ್ಥಳೀಯರು, ಶಾಲಾ ಸಿಬ್ಬಂದಿ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ಹಿನ್ನೆಲೆಯಲ್ಲಿ ಡಿಡಿಪಿಐ ನಾರಾಯಣಗೌಡ ಆ. 8ರಂದು ಅಮಾನತುಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಕ್ರೀಡಾಕೂಟ ಸಮಾರೋಪ
ಬಳ್ಳಾರಿ: ಭಾರತೀಯ ವೈದ್ಯಕೀಯ ಸಂಘದಿಂದ ನಗರದ ಪೊಲೀಸ್ ಜಿಮ್‌ಖಾನಾದಲ್ಲಿ ಎರಡು ದಿನಗಳಿಂದ ನಡೆದ ಶಟಲ್ ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಕ್ರೀಡಾಕೂಟಗಳ ಸಮಾರೋಪ ಸಮಾರಂಭ ಜರುಗಿತು. 120ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಡಾ. ಹಿತೈಶ್ರೀ ಸಮಗ್ರ ಮಹಿಳಾ ವೀರಾಗ್ರಣಿ ಪ್ರಶಸ್ತಿ, ಡಾ. ಸತೀಶ್ ಸಮಗ್ರ ಪುರುಷ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದರು. ಭಾರತೀಯ ವೈದ್ಯಕೀಯ ಸಂಘದ ನಿಯೋಜಿತ ರಾಜ್ಯಾಧ್ಯಕ್ಷ ಯೋಗಾನಂದ ರೆಡ್ಡಿ ಪ್ರಶಸ್ತಿಗಳನ್ನು ವಿತರಿಸಿ, ಅನಂತರ ಮಾತನಾಡಿದರು. ಐಎಂಎ ಪದಾಧಿಕಾರಿಗಳಾದ ಡಾ. ಅರವಿಂದ್ ಪಾಟೀಲ್, ಡಾ. ಸುಬ್ಬಾರಾವ್, ಡಾ. ಮರಿರಾಜ್, ಡಾ. ಸುಧಾಕರ್, ಡಾ. ರಾಮಚಂದ್ರಪ್ಪ, ಡಾ. ಅಜಿತ್ ಕುಲಕರ್ಣಿ, ಡಾ. ಟಿ.ವೈ. ರಘು, ಡಾ. ಸೋಮನಾಥ್ ಉಪಸ್ಥಿತರಿದ್ದರು.
ಬಾಲಕಿ ಕಾಣೆ: ದೂರು
ಬಳ್ಳಾರಿ: ನಗರದ ಕೌಲ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಬಾಲಕಿಯೋರ್ವಳು ಕಾಣೆಯಾಗಿರುವ ಘಟನೆ ಜರುಗಿದೆ. ಸೋನಿಗಿರಿ (16) ಎಂಬ ಬಾಲಕಿಯೇ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಬೋಲನಾಥ ಗಿರಿ ಠಾಣೆಗೆ ದೂರು ನೀಡಿದ್ದಾರೆ. ಈಕೆ ಅಂದಾಜು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಸುಳಿವು ಸಿಕ್ಕಲ್ಲಿ ಕೌಲ್‌ಬಜಾರ್ ಠಾಣೆಗೆ ಸಂಪರ್ಕಿಸಬೇಕೆಂದು ಪಿಎಸ್‌ಐ ಕೋರಿದ್ದಾರೆ.
ಬೀಗ ಮುರಿದು ಕಳ್ಳತನ
ಬಳ್ಳಾರಿ: ನಗರದ ಕೌಲ್‌ಬಜಾರ್ ಪ್ರದೇಶದ ಬೈಪಾಸ್ ರಸ್ತೆಯ ಉರ್ದು ಶಾಲೆ ಎದುರುಗಡೆಯ ಮನೆಯೊಂದರ ಬೀಗ ಮುರಿದು ರು. 55 ಸಾವಿರ ನಗದು ಹಾಗೂ 12 ಗ್ರಾಂ ಬಂಗಾರದ ಆಭರಣಗಳನ್ನು ಕದ್ದ ಪ್ರಕರಣ ಭಾನುವಾರ ತಡರಾತ್ರಿ ನಡೆದಿದೆ.
ಕೌಲ್‌ಬಜಾರ್‌ನ ಉರ್ದು ಶಾಲೆ ಬಳಿಯ ನಿವಾಸಿ ಬಾಷಾ ಹಾಗೂ ಕುಟುಂಬದ ಸದಸ್ಯರು ಊರಿಗೆ ತೆರಳಿದ್ದರು. ಊರಿನಿಂದ ಮರಳಿ ಬಂದು ನೋಡಿದಾಗ ಮನೆಯ ಬೀಗ ಮುರಿದು ಅಲ್ಮೆರಾದಲ್ಲಿದ್ದ ನಗದು ಮತ್ತು ಚಿನ್ನದಾಭರಣಗಳು ಕಳವು ಆಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement