ಬೇಲೆಕೇರಿ ಅದಿರು ನಾಪತ್ತೆ: ಸಿಬಿಐ ಕಸ್ಟಡಿಗೆ ಅಧಿಕಾರಿಗಳು
ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅಧಿಕಾರಿಗಳು ಅರಣ್ಯ ಹಾಗೂ ಬಂದರು ಇಲಾಖೆಗೆ ಸಂಬಂಧಿಸಿದ ಮೂವರು ಅಧಿಕಾರಿಗಳನ್ನು ಬಂಧಿಸಿದೆ.
ಮಂಗಳವಾರ ನ್ಯಾಯಾಲಯಕ್ಕೆ ಅವರನ್ನು ಹಾಜರು ಪಡಿಸಿದ್ದು, ಸಿಬಿಐ ಮನವಿ ಮೇರೆಗೆ ಅಧಿಕಾರಿಗಳನ್ನು 14 ದಿನಗಳ ಕಾಲ ಸಿಬಿಐ ವಶಕ್ಕೆ ನ್ಯಾಯಾಲಯ ನೀಡಿದೆ. ಬೇಲೆಕೇರಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ, ಅರಣ್ಯಾಧಿಕಾರಿಗಳಾದ ನರೇಂದ್ರ ಹಿತ್ಲಮಕ್ಕಿ, ಚಂದ್ರಕಾಂತ್ ನಾಯಕ್ ಅವರು ಬಂಧಿತ ಅಧಿಕಾರಿಗಳು. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈ ಮೂವರು ಅಧಿಕಾರಿಗಳ ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಬಿಐ ಕಚೇರಿಗೆ ಕರೆಯಿಸಲಾಗಿತ್ತು, ವಿಚಾರಣೆಯ ನಂತರ ಸಿಬಿಐ ಅಧಿಕಾರಿಗಳು ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಶಕ್ಕೆ ತೆಗೆದುಕೊಂಡಿರುವ ಈ ಮೂವರು ಅಧಿಕಾರಿಗಳನ್ನು ಮಂಗಳವಾರ ಸಿಬಿಐ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, ವಿಚಾರಣೆಗೆಂದು 14 ದಿನಗಳ ಕಾಲ ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಚಾರಣೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಅರಣ್ಯ, ಬಂದರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಇನ್ನು ವಿಚಾರಣೆ ಮುಂದುವರೆಯುವುದರಿಂದ ಮತ್ತಷ್ಟು ಅಧಿಕಾರಿಗಳನ್ನು ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.