ವಿದ್ಯಾರ್ಥಿ ಸಾವಿನ ಕುರಿತು ತನಿಖೆಯಾಗಲಿ
ಬಳ್ಳಾರಿ: ನಗರದ ಸಂತ ಜೋಸೆಫ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಸ್. ಪಾಲ್‌ಕುಮಾರ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ಸಂರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಎಸ್ಪಿ ಡಾ. ಚೇತನ್‌ಸಿಂಗ್ ರಾಥೋಡ್ ಅವರಿಗೆ ವೇದಿಕೆಯ ಜಿಲ್ಲಾಧ್ಯಕ್ಷ ಎಚ್. ವೆಂಕಟೇಶ್, ಉಪಾಧ್ಯಕ್ಷ ಚಂದ್ರನಾಗರಾಜ್, ಸಿ. ಶ್ರೀನಿವಾಸ್, ವೀರಾಸ್ವಾಮಿ ಹಾಗೂ ಮತ್ತಿತರರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪಾಲ್‌ಕುಮಾರ್ ಅನುಮಾನಾಸ್ಪದ ರೀತಿಯಲ್ಲಿ ಮೃತನಾಗಿದ್ದು, ಈ ಕುರಿತು ಸೂಕ್ತ, ಕೂಲಕಂಷ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಕಳೆದ ಭಾನುವಾರ ರಾತ್ರಿ 7.30ರ ಸುಮಾರಿಗೆ ಮನೆಯಿಂದ ಹೋದವನು ಮರಳಿ ಬಂದಿಲ್ಲ. ಮರುದಿನ ಆತನ ಶವವು ನಗರದ ಅಲ್ಲೀಪುರ ಸಮೀಪದ ರೇಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಆದರೆ ಯಾರ ತಂಟೆಗೂ ಹೋಗದ ಈತನು, ಉತ್ತಮ ವಿದ್ಯಾರ್ಥಿಯಾಗಿದ್ದನು. ಹೀಗಾಗಿ ಇವನ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಸೂಕ್ತ ತನಿಖೆ ನಡೆಸಿ, ಸತ್ಯಾಂಶ ಬಯಲಿಗೆಳೆಯಬೇಕು ಮತ್ತು ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ವಿತರಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ. ಸುರೇಶ್, ವಿ. ಬ್ರಹ್ಮಯ್ಯ, ಈ. ಈಶ್ವರ್, ಆರ್. ಶಿವಶಂಕರ್, ಲಕ್ಷ್ಮಿಪತಿ, ಮಾರೇಶ್, ಕೆಂಚಪ್ಪ, ಮುರಳಿ ಹಾಗೂ ಇತರರು ಇದ್ದರು.
--
ಗ್ರಾಮ ಸಮಿತಿ ಆರಂಭೋತ್ಸವ
ಕೊಟ್ಟೂರು: ಸಮೀಪದ ದೂಪದಹಳ್ಳಿ ತಾಂಡದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೂಪದಹಳ್ಳಿ ತಾಂಡದ ಸಮಿತಿ ಅಧ್ಯಕ್ಷರಾಗಿ ಎಲ್.ಎಸ್. ರಮೇಶ್‌ನಾಯ್ಕ, ಗೌರವ ಅಧ್ಯಕ್ಷ ಎಲ್.ಕೆ. ಗೋಪಿನಾಯ್ಕ, ಕಾರ್ಯಾಧ್ಯಕ್ಷ ಎಲ್.ಎಚ್. ರತ್ನನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಎಲ್.ಟಿ. ವೆಂಕಟೇಶ್ ನಾಯ್ಕ, ಎಲ್.ಟಿ. ಪೀರ್ಯನಾಯ್ಕ, ಸಹಕಾರ್ಯದರ್ಶಿಯಾಗಿ ಎಲ್.ಎಲ್. ಹರೀಶ್‌ನಾಯ್ಕ, ಗಿರಿವಾಳ ದುರ್ಗನಾಯ್ಕ, ಖಜಾಂಚಿಯಾಗಿ ಎಲ್.ಜಿ. ಕೃಷ್ಣನಾಯ್ಕ ಮತ್ತು ಸಕ್ರನಾಯ್ಕ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ರಾಜ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.