ಆಧ್ಯಾತ್ಮಿಕ ಚಿಂತನೆಗಳಿಂದ ನೆಮ್ಮದಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 22
ಆಧ್ಯಾತ್ಮಿಕ ಚಿಂತನೆಗಳು ಮನಸಿಗೆ ಸದಾ ನೆಮ್ಮದಿ ಮತ್ತು ಆನಂದ ನೀಡುತ್ತವೆ. ಜತೆಗೆ ಮನುಷ್ಯನ ಸನ್ಮಾರ್ಗಕ್ಕೆ ಪೂರಕವಾಗಿದೆ ಎಂದು ಬೇವಿನಹಾಳ್ ಪ್ರಹ್ಲಾದಾಚಾರ್ಯ ಅಭಿಪ್ರಾಯಪಟ್ಟರು.
ನಗರದ ಕೌಲ್ಬಜಾರ್ ಪ್ರದೇಶದ ಶ್ರೀಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಶ್ರೀಗುರುರಾಜ ಸೇವಾ ಸಮಿತಿ ವತಿಯಿಂದ ಶ್ರೀರಾಘವೇಂದ್ರ ಸ್ವಾಮಿಗಳ 342ನೇ ಮಧ್ಯಾರಾಧನೆ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರುರಾಯರ ಮಹಿಮೆ ಕುರಿತು ಅವರು ಮಾತನಾಡಿದರು.
ದೇಶದ ಸನಾತನ ಸಂಸ್ಕೃತಿ ಉಳಿಸಿ, ಬೆಳೆಸುವ ಜವಾಬ್ದಾರಿ ಯುವ ಸಮೂಹ ಸೇರಿದಂತೆ ಪ್ರತಿಯೊಬ್ಬರ ಮೇಲಿದೆ ಎಂದರು. ಆರಾಧನೆ ನಿಮಿತ್ತ ರಾಯರ ಚರ ವೃಂದಾವನಕ್ಕೆ ವಿಶೇಷ ಅಭಿಷೇಕ, ಅರ್ಚನೆ, ಅಲಂಕಾರ ಮಾಡಲಾಗಿತ್ತು. ಸಮಿತಿಯ ಗುಬ್ಬಿ ಗುರುರಾಚಾರ್ಯ, ಉದಯ ಅಗಸನೂರು, ಭೀಮರಾವ್ ಕುಲಕರ್ಣಿ ಇದ್ದರು.
ಕನಕ ಮಹಾಪೂಜೆ: ನಗರದ ಸತ್ಯನಾರಾಯಣ ಪೇಟೆ ಮತ್ತು ತೇರು ಬೀದಿಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ನಡೆಯಿತು. ವಿಶೇಷ ಫಲ ಪಂಚಾಮೃತಾಭಿಷೇಕ, ತುಳಸಿ, ಪುಷ್ಪ ಅರ್ಚನೆ, ಕನಕ ಮಹಾಪೂಜೆ, ಸರ್ವಸೇವೆ ನಡೆಯಿತು.
ರಾಯರ ವಾಣಿ ಆಶ್ರಮ: ನಗರದ ಸತ್ಯಸಾಯಿ ಕಾಲೊನಿಯ ಶ್ರೀಗುರುರಾಯರ ವಾಣಿ ಆಶ್ರಮದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ನಡೆಯಿತು. ಬೆಳಗ್ಗೆ ಈಶ್ವರ, ಆಂಜನೇಯ ಸ್ವಾಮಿ ಹಾಗೂ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಶ್ರಮದ ರಾಘವೇಂದ್ರ, ಶ್ರೀನಿವಾಸ್, ನರಸಿಂಗ ರಾವ್, ರಘುನಂದನ, ಪದ್ಮನಾಭ, ವಿಜಯ ವಿಠಲ್, ಎಎಸ್ಐ ಪಾಂಡುರಂಗ ರಾವ್ ಇತರರಿದ್ದರು. ಮಹಿಳಾ ಭಜನೆ ಮಂಡಳಿಯಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.
ಸತ್ಯನಾರಾಯಣ ದೇವಸ್ಥಾನ: ನಗರದ ಸತ್ಯನಾರಾಯಣ ದೇವಸ್ಥಾನದಲ್ಲಿ ಶ್ರೀರಾಯರ 342ನೇ ಆರಾಧನೆ ನಡೆಯಿತು. ಬೆಳಗ್ಗೆ ಸತ್ಯನಾರಾಯಣ ದೇವರಿಗೆ, ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಪೂಜೆ ಸಲ್ಲಿಸಲಾಯಿತು. ಅಷ್ಟೋತ್ತರ ಪಠಣ ನಡೆಯಿತು. ದೇವಸ್ಥಾನದ ಮುರುಳಿ, ತಾಮ್ರಣಿ, ರಾಮರಾವ್, ಹನುಮೇಶ್ ರಾವ್, ಪ್ರಹ್ಲಾದ್ ರಾವ್ ಮುಂತಾದವರು ಉಪಸ್ಥಿತರಿದ್ದರು