ಗಣಿ ಗುತ್ತಿಗೆ ನೀಡಲು ಸಿಇಸಿ ಗ್ರೀನ್ ಸಿಗ್ನಲ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 22
ಇಷ್ಟು ದಿನಗಳ ಕಾಲ ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೇವಲ ವಿವಾದಗಳು, ಶಾಕ್ ಸುದ್ದಿಗಳನ್ನೇ ಕೇಳಿ ಗಣಿ ಮಾಲೀಕರು ಹೌಹಾರಿದ್ದರು. ಇನ್ನುಮುಂದೆ ಹೊಸದಾಗಿ ಗಣಿ ಗುತ್ತಿಗೆ ಪಡೆಯುವುದು ಅಸಾಧ್ಯದ ಮಾತು ಎಂದು ಅನೇಕರು ತಿಳಿದಿದ್ದರು. ಆದರೆ, ಕಾನೂನಾತ್ಮಕವಾಗಿ, ಆರ್ ಅಂಡ್ ಆರ್ ನಿಯಮಗಳನ್ನು ಅನ್ವಯಿಸಿ ಹೊಸಗಣಿ ಗುತ್ತಿಗೆ ನೀಡಬಹುದು ಎಂಬ ವಿಷಯದಿಂದ ಮತ್ತೆ ಗಣಿಗಾರಿಕೆ ಆರಂಭವಾಗಲಿದೆ.
ಹೌದು.., ಇದನ್ನು ಹೇಳಿದ್ದು ನಾವಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಸಿಇಸಿಯು(ಕೇಂದ್ರ ಉನ್ನತ ಅಧಿಕಾರ ಸಮಿತಿ) ಜು. 18ರಂದು ಬರೆದ ಪತ್ರದಲ್ಲಿ ಗಣಿಗಾರಿಕೆ ಆರಂಭದ ಕುರಿತ ಮಾಹಿತಿಯನ್ನು ತಿಳಿಸುವ ಮೂಲಕ ಗಣಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದೆ. ಸಿಇಸಿಯು ಡಿಎಂಜಿಗೆ ಬರೆದ ಪತ್ರದ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಸಿಇಸಿ ಮರು ಪತ್ರ: ಈ ಹಿಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ, ಮ್ಯಾನಿಟರಿಂಗ್ ಕಮಿಟಿಯ ಸಂಚಾಲಕ ಎಚ್.ಆರ್. ಶ್ರೀನಿವಾಸ್ ಅವರು (ಈ ವರ್ಷದ ಜುಲೈ ಕೊನೆಯಲ್ಲಿ ಶ್ರೀನಿವಾಸ್ ವರ್ಗಾವಣೆಯಾಗಿದ್ದಾರೆ) ಮೇ 31ರಂದು 2013ರಂದು ಕೇಂದ್ರ ಉನ್ನತಾಧಿಕಾರ ಸಮಿತಿಗೆ ಪತ್ರ ಬರೆದು, ಹೊಸದಾಗಿ ಗಣಿ ಗುತ್ತಿಗೆ ನೀಡಬಾರದು ಎಂದು ತಿಳಿಸಿದ್ದರು.
ಇದು ಗಣಿ ಮಾಲೀಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೆ, ಶ್ರೀನಿವಾಸ್ ಅವರ ಪತ್ರಕ್ಕೆ ಜು. 18, 2013ರಂದು ಕೇಂದ್ರ ಉನ್ನತಾಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವ್ರಾಜ್ಕ ಅವರು ಮರುಪತ್ರ ಬರೆದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೊಸ ಗಣಿ ಗುತ್ತಿಗೆಯನ್ನು ಕಾನೂನು ಅಡಿಯಲ್ಲಿ ಪರವಾನಗಿ ನೀಡಬಹುದು ಎಂದು ತಿಳಿಸಿದ್ದಾರೆ.
ಸಿಇಸಿ ಬರೆದ ಪತ್ರದಲ್ಲಿ ಏನಿದೆ?: ರಿಟ್ ಪಿಟಿಷನ್ (ನಂ. 562/2009) ಪ್ರಕಾರ ಹೊಸ ಗಣಿ ಗುತ್ತಿಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಆದೇಶ ನ. 2, 2012ರ ವರೆಗೆ ಜಾರಿಯಲ್ಲಿತ್ತು. ಸುಪ್ರೀಂ ಕೋರ್ಟ್ 2013, ಏ. 18ರಂದು ಮತ್ತೊಂದು ಆದೇಶ ಹೊರಡಿಸಿ, ಹೊಸ ಗಣಿ ಗುತ್ತಿಗೆ ಅರ್ಜಿ ಸಲ್ಲಿಸಿರುವವರು ಹಾಗೂ ಹೊಸ ಗಣಿ ಗುತ್ತಿಗೆ ಅರ್ಜಿಗಳನ್ನು ಕಾನೂನಿನಡಿ ಪರಿಗಣಿಸಬೇಕು. ಕಾನೂನು ಪ್ರಕಾರವಾಗಿ ಪರವಾನಗಿ ನೀಡಬಹುದು ಎಂದು ಹೇಳಿತು. ಇನ್ನು ಕೇಂದ್ರ ಉನ್ನತಾಧಿಕಾರ ಸಮಿತಿಯು ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ, ಆಯಾ ಜಿಲ್ಲೆಗೆ ನೀಡಿರುವ ಒಟ್ಟು ಅದಿರು ಉತ್ಪಾದನೆ, ಗಣಿ ಗುತ್ತಿಗೆ ಆಧಾರದ ಮೇಲೆ ವಾರ್ಷಿಕ ಅದಿರು ಉತ್ಪಾದನೆ ಮತ್ತು ಆರ್ ಅಂಡ್ ಆರ್ ( ಗಣಿ ಪರಿಸರದ ಪುನಶ್ಚೇತನ ಹಾಗೂ ಪುನರ್ ನಿರ್ಮಾಣ) ನಿಯಮಗಳ ಅಡಿ ಆರ್ ಅಂಡ್ ಆರ್ನ್ನು ಅನುಷ್ಠಾನಗೊಳಿಸುವ ರೀತಿಯಲ್ಲಿ ಹೊಸ ಗಣಿ ಗುತ್ತಿಗೆಗೆ ಪರವಾನಗಿ ನೀಡಬಹುದು ಎಂಬ ಅಂಶವನ್ನು ಸಿಇಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ನಿಟ್ಟುಸಿರು ಬಿಟ್ಟ ಗಣಿ ಮಾಲೀಕರು: ಕಳೆದ 2-3 ವರ್ಷಗಳಿಂದ ಗಣಿ ಮಾಲೀಕರು ಸಿಬಿಐ, ಸಿಇಸಿ, ಲೋಕಾಯುಕ್ತ ತನಿಖೆಯಿಂದ ಬೇಸತ್ತು ಹೋಗಿದ್ದು, ಇನ್ನುಮುಂದೆ ಗಣಿಗಾರಿಕೆಯೇ ಮರೀಚಿಕೆ ಎನ್ನುವಂತಾಗಿತ್ತು.
ಆದರೆ ಸಿಇಸಿಯು ಎ,ಬಿ,ಸಿ ವರ್ಗೀಕರಣ ಮಾಡುವ ಮೂಲಕ ಎ ಮತ್ತು ಬಿ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿದ ಬೆನ್ನಲ್ಲೇ, ಇದೀಗ ಹೊಸ ಗಣಿ ಗುತ್ತಿಗೆಗೆ ಕಾನೂನಿಡಿಯಲ್ಲಿ ಪರವಾನಗಿ ನೀಡಬಹುದು ಎಂಬುದು ನಿಟ್ಟುಸಿರುವ ಬಿಡುವಂತಾಗಿದೆ. ರಾಜ್ಯದ ಡಿಎಂಜಿ (ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ) ಹೊಸ ಗಣಿ ಗುತ್ತಿಗೆ ನೀಡಬಾರದು ಎಂಬ ಪತ್ರಕ್ಕೆ ಸಿಇಸಿಯು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸುತ್ತ, ನ್ಯಾಯಾಲಯ ನಿರ್ದೇಶನದ ಮೇರೆಗೆ ಹೊಸ ಗಣಿ ಗುತ್ತಿಗೆಗೆ ಪರವಾನಗಿ ನೀಡಬಹುದು ಎಂದು ಹೇಳುವ ಮೂಲಕ ರಾಜ್ಯದ ಡಿಎಂಜಿ ಪತ್ರವನ್ನು ಮಾನ್ಯ ಮಾಡದೆ, ತಳ್ಳಿಹಾಕಿದೆ.
ಇದು ರಾಜ್ಯದ ಗಣಿ ಮಾಲೀಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.
- ಶಶಿಧರ ಮೇಟಿ