ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾನುವಾರು ವಿಮಾ ಯೋಜನೆ ಅನುಷ್ಠಾನ

Lingaraj Badiger
Updated On : 23 Aug 2013, 12:29 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 22
ಕೇಂದ್ರ ಸರ್ಕಾರದ ಆದೇಶದನ್ವಯ ಹೆಚ್ಚು ಹಾಲು ನೀಡುವ ರಾಸುಗಳ ಸಂರಕ್ಷಣೆಗಾಗಿ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆಯು ಪಶು ಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೂಲಕ ಜಾನುವಾರು ವಿಮಾ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಅರ್ಹ ರೈತರು ಈ ಯೋಜನೆಯ ಲಾಭ ಪಡೆಯಬೇಕೆಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಜಿ. ಪಂಪಾಪತಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾನುವಾರು ಸಾಕಾಣಿಕೆ ರೈತರಿಗೆ ಪೂರಕ ಆದಾಯ ಒದಗಿಸುವುದರೊಂದಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿ ಮತ್ತಿತರೆ ಕಸುಬುಗಳಲ್ಲಿ ಸಂಕಷ್ಟಕ್ಕೆ ಒಳಗಾದ ರೈತರ ಉಳಿವಿಗೆ ನೆರವು ನೀಡಲಿದೆ ಎಂದಗಿದ್ದಾರೆ.
ಯೋಜನೆಯ ಉದ್ದೇಶ: ಹೆಚ್ಚು ಹಾಲು ಕೂಡುವ ಉತ್ತಮ ರಾಸುಗಳು ರಾಷ್ಟ್ರದ ಸಂಪತ್ತು. ಈ ಸಂಪತ್ತಿನ ಸಂರಕ್ಷಣೆಗಾಗಿ ಹಾಗೂ ಜೀವನಾಧಾರವಾದ ರಾಸುಗಳು ಆಕಸ್ಮಿಕ ಮರಣ ಹೊಂದಿದಲ್ಲಿ ರೈತ ಕುಟುಂಬ ಸಂಕಷ್ಟಕ್ಕೆ ಒಳಪಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ಆರ್ಥಿಕ ನೆರವಿನ ದೃಷ್ಟಿಯಿಂದ ಈ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ.
ರೂಪುರೇಷೆಗಳು: ಈ ಯೋಜನೆಯಡಿ ಫಲಾನುಭವಿಯ ಎರಡು ಜಾನುವಾರುಗಳನ್ನು ಮಾತ್ರ ವಿಮೆಗೆ ಪರಿಗಣಿಸಲಾಗುವುದು. ಒಂದು ಸೂಲಿನಲ್ಲಿ 1500 ಲೀ. ಅಥವಾ ಅದಕ್ಕಿಂತ ಹೆಚ್ಚು ಹಾಲು ನೀಡುವ ಹಸು ಮತ್ತು ಎಮ್ಮೆಗಳು ಈ ಯೋಜನೆಗೊಳಪಡಲಿವೆ. ಫಲಾನುಭವಿಗಳು ತಮ್ಮ ಜಾನುವಾರುಗಳನ್ನು ವಿಮಾ ಯೋಜನೆಗೊಳಪಡಿಸಲು 1, 2 ಅಥವಾ 3 ವರ್ಷದ ಅವಧಿಗೆ ವಿಮಾ ಕಂತನ್ನು ಕಟ್ಟಬೇಕು. ಜಾನುವಾರಿನ ನಿಗದಿತ ಬೆಲೆಯ ಆಧಾರದ ಮೇಲೆ ಒಂದು ವರ್ಷಕ್ಕೆ ಶೇ. 3.25, ಎರಡು ವರ್ಷಕ್ಕೆ ಶೇ. 5.85 ಹಾಗೂ 3 ವರ್ಷಕ್ಕೆ ಶೇ. 8.29ರಷ್ಟು ವಿಮಾ ಕಂತನ್ನು ಕಟ್ಟಬೇಕಾಗುತ್ತದೆ. ಜಾನುವಾರುಗಳ ಬೆಲೆಯನ್ನು ಪಶುವೈದ್ಯಾಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ನಿಗದಿಪಡಿಸುತ್ತಾರೆ. ವಿಮಾ ಕಂತಿನ ಶೇ. 50ರಷ್ಟು ಸರ್ಕಾರದಿಂದ ಭರಿಸಲಾಗುವುದು. ಉಳಿದ ಶೇ. 50ರಷ್ಟು ವಿಮಾ ಕಂತಿನ ಹಣ ಹಾಗೂ ವಿಮಾ ಕಂತಿನ ಶೇ. 12.36ರಷ್ಟು ಸೇವಾತೆರಿಗೆಯನ್ನು ಫಲಾನುಭವಿ, ರೈತರು ಭರಿಸತಕ್ಕದ್ದು. ಸೇವಾ ತೆರಿಗೆಗೆ ಸಹಾಯಧನದ ಲಭ್ಯವಿರುವುದಿಲ್ಲ. ಮರಣ ಹೊಂದಿದ ರಾಸುಗಳ ಮೌಲ್ಯವನ್ನು ವಿಮಾ ಕಂಪನಿಗಳು ಭರಿಸುತ್ತವೆ.
ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ- 08392-276358, 275146, ಸಿರುಗುಪ್ಪ-08396-220336, ಸಂಡೂರು-08395-260338, ಹೊಸಪೇಟೆ-08394- 227320, ಹಗರಿಬೊಮ್ಮನಹಳ್ಳಿ-08397- 238352, ಹಡಗಲಿ- 08399- 240314, ಕೂಡ್ಲಿಗಿ-08391-220371 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement