ಶಿಕ್ಷಕರ ಕೊರತೆ: ಗ್ರಾಮಸ್ಥರ ಧರಣಿ
ಕನ್ನಡಪ್ರಭ ವಾರ್ತೆ, ಕುರುಗೋಡು, ಆ. 22
ಇಲ್ಲಿಗೆ ಸಮೀಪದ ಕಲ್ಲುಕಂಬ ಗ್ರಾಮದ ಸ.ಹಿ.ಪ್ರಾ. ಶಾಲೆಯ ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಿದರು.
ಎಸ್‌ಡಿಎಂಸಿಯ ಮಂಜುನಾಥ್ ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮದ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ವರ್ಷದಿಂದ ಶಿಕ್ಷಕರ ಕೊರತೆ ಇದೆ. ಪ್ರತಿವರ್ಷ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭಗೊಂಡು ಮೂರು ತಿಂಗಳಾಗಿದೆ. ಕಳೆದ ವರ್ಷ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದಾಗಿ ಶಿಕ್ಷಣ ಇಲಾಖೆ ಘೋಷಿಸಿದೆ. ಆದರೆ ಇದುವರೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿಲ್ಲ. ಇಷ್ಟರಲ್ಲೆ ಮಧ್ಯ ವಾರ್ಷಿಕ ಪರೀಕ್ಷೆ ಹತ್ತಿರಗೊಳ್ಳುತ್ತಿವೆ. ಶಿಕ್ಷಕರಿಲ್ಲದ ಕಾರಣ ಗುಣಮಟ್ಟದ ಶಿಕ್ಷಣ ಕನಸಿನ ಮಾತಾಗಿದೆ. ಹೀಗಾಗಿ ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಶಾಲೆಗೆ ಮುಖ್ಯವಾಗಿ ಕನ್ನಡ ವಿಷಯಕ್ಕೆ ಇಬ್ಬರು ಬೇಕಿದ್ದು, ಇಂಗ್ಲಿಷ್, ಹಿಂದಿ, ದೈಹಿಕ ಶಿಕ್ಷಣ ಬೋಧನೆಗೆ ಶಿಕ್ಷಕರಿಲ್ಲ. ಮಾತೃಭಾಷೆಗೆ ಶಿಕ್ಷಕರನ್ನು ನೀಡುವಲ್ಲಿ ಇಲಾಖೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದು, ನಾವು ಯಾವ ರಾಜ್ಯದಲ್ಲಿದ್ದೇವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹೊಣೆಯಾಗಿದ್ದು, ಕಾಯಂ ಶಿಕ್ಷಕರನ್ನು ನೀಡುವವರೆಗೆ ಹೋರಾಟ ಮುಂದುವರೆಯಲಿದೆ. ಇದಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಶಾಲೆಗೆ ಬೀಗ ಜಡಿದು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಅನಂತರ ಗ್ರಾಮದ ಮುಖಂಡ ಎರ್ರಿಸ್ವಾಮಿ ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷೆ ಎನ್. ರೂಪ, ಜಿ. ಪಂಪಣ್ಣ, ಮೇಟಿ ಬಸವರಾಜ್, ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಜೆ. ಬಸವರಾಜ್, ಪುಟ್ಟರಾಜ ಗವಾಯಿ ಸಂಘದ ಅಧ್ಯಕ್ಷ ವೀರೇಶ್, ಗ್ರಾಪಂ ಸದಸ್ಯರು, ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು ಇದ್ದರು.