ಇಸ್ಪೀಟ್ ಜೂಜಾಟ: ಬಂಧನ
ಬಳ್ಳಾರಿ: ಸಾರ್ವಜನಿಕ ರಸ್ತೆಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ಸಿರುಗುಪ್ಪ ಪೊಲೀಸರು ದಾಳಿ ಮಾಡಿ, ಆರೋಪಿತರಿಂದ ರು. 6560 ವಶಪಡಿಸಿಕೊಂಡಿರುವ ಘಟನೆ ಸಿರುಗುಪ್ಪ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಸಿರುಗುಪ್ಪ ಪಟ್ಟಣದ ಬಳ್ಳಾರಿ ರಸ್ತೆಯ ಮಯೂರ ಲಾರಿ ಟ್ರಾನ್ಸ್ಪೋರ್ಟ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಹರ್ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿರುಗುಪ್ಪ ಪೊಲೀಸರು ದಾಳಿ ಮಾಡಿ, ಆರೋಪಿತರನ್ನು ಬಂಧಿಸಿ, ಅವರಿಂದ ರು. 6560, ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರುಗುಪ್ಪ ಬಳಿ ಲಾರಿ ಡಿಕ್ಕಿ: ಪಾದಚಾರಿ ಸಾವು
ಬಳ್ಳಾರಿ: ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಿರುಗುಪ್ಪ ಪಟ್ಟಣದ ಆದೋನಿ ರಸ್ತೆಯಲ್ಲಿ ನಡೆದಿದೆ. ಕೆ. ಪ್ರಹ್ಲಾದ ಮೃತನು. ಈತನು ಆ. 21ರಂದು ರಾತ್ರಿ ಸಿರುಗುಪ್ಪ ಪಟ್ಟಣ ಆದೋನಿ ರಸ್ತೆಯಲ್ಲಿ ಸದಾಶಿವನಗರದಲ್ಲಿರುವ ತನ್ನ ಮನೆಯ ಕಡೆಗೆ ಹೋಗುವ ಆದೋನಿ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆ. ಪ್ರಹ್ಲಾದ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಇಬ್ಬರ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿ, ರು. 22,100 ನಗದು, ಇಬ್ಬರನ್ನು ಬಂಧಿಸಿರುವ ಘಟನೆ ಕುರುಗೋಡು ಪಟ್ಟಣದಲ್ಲಿ ಗುರುವಾರ ನಡೆದಿದೆ.
ಕುರುಗೋಡು ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 22,100 ನಗದು, ಮಟ್ಕಾ ಪಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.